ಹುಬ್ಬಳ್ಳಿ-ಧಾರವಾಡ ಸುದ್ದಿ

ಮೇಯರ್ ಚುನಾವಣೆ: ಹಿರಿತನಕ್ಕೆ ಮಣೆ !

ಉಪಮೇಯರ ಪಟ್ಟ-ಭರವಸೆಗೆ ಆದ್ಯತೆ
ಕೇಸರಿ ಸದಸ್ಯರ ಗ್ರ್ಯಾಂಡ್ ವಾಸ್ತವ್ಯ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಚುನಾವಣೆ ನಾಳೆ ನಡೆಯಲಿದ್ದು, ಎರಡೂ ಸ್ಥಾನಗಳಿಗೂ ಪೈಪೋಟಿ ಕಂಡು ಬರುತ್ತಿದೆಯಾದರೂ ಹಿರಿತನಕ್ಕೆ ಅಲ್ಲದೇ ಪಕ್ಷಕ್ಕೆ ಸೇರ್ಪಡೆ ಮೊದಲು ನೀಡಿದ ಆಶ್ವಾಸನೆಯಂತೆ ಬಿಜೆಪಿ ಮಣೆ ಹಾಕುವದು ನಿಶ್ಚಿತವಾಗಿದೆ.

37ನೇ ವಾರ್ಡಿನ ಸದಸ್ಯ ಉಮೇಶ ಕೌಜಗೇರಿ ಹಾಗೂ 43ನೇ ವಾರ್ಡಿನ ಬೀರಪ್ಪ ಖಂಡೇಕರ ಇವರುಗಳ ಹೆಸರು ಮೇಯರ್ ಸ್ಥಾನಕ್ಕೆ ಪ್ರಭಲವಾಗಿ ಕೇಳಿ ಬರುತ್ತಿದ್ದರೂ ಪಶ್ಚಿಮ ಕ್ಷೇತ್ರದ ವ್ಯಾಪ್ತಿಗೆ ಬರುವ 30ನೇ ವಾರ್ಡಿನ ಸದಸ್ಯ ರಾಮಣ್ಣ ಬಡಿಗೇರಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಳವಾಗಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ದಟ್ಟವಾಗಿವೆ.
ನಾಲ್ಕನೇ ಬಾರಿಗೆ ಪಾಲಿಕೆಗೆ ಪ್ರವೇಶಿಸಿರುವ ರಾಮಣ್ಣ ಬಡಿಗೇರ ಈ ಹಿಂದೆ ಎರಡು ಬಾರಿ ಗೌನಭಾಗ್ಯ ಅವಕಾಶದಿಂದ ವಂಚಿತರಾಗಿದ್ದಾರೆಂಬ ಮಾತೂ ಇದೆ.
ಮೂರು ಬಾರಿ ಪಾಲಿಕೆಗೆ ಆಯ್ಕೆಯಾಗಿರುವ ಖಂಡೇಕರ ಮತ್ತು ಉಣಕಲ್ ಪ್ರದೇಶದ ಕೌಜಗೇರಿ ತೀವ್ರ ಯತ್ನ ನಡೆಸಿದ್ದಾರೆ.


ಇನ್ನೊಂದೆಡೆ ತಿಪ್ಪಣ್ಣ ಮಜ್ಜಗಿ ಅರ್ಹ ಅಭ್ಯರ್ಥಿಯಾಗಿದ್ದರೂ ಮಹಾನಗರ ಅಧ್ಯಕ್ಷ ಹುದ್ದೆ ಹೊಂದಿರುವುದರಿಂದ ಅವರ ಪರಿಗಣಿಸುವ ಸಾಧ್ಯತೆ ಕಡಿಮೆ. ಮೊದಲೆ ಬಿಜೆಪಿಯಿಂದ ಕುರುಬ ಸಮುದಾಯ ದೂರವಾಗಿದ್ದು ಈ ಬಾರಿ ಕುರುಬ ಸಮುದಾಯದವರಿಗೆ ಮೇಯರ್ ಪಟ್ಟ ನೀಡಬೇಕೆಂದು ಪಕ್ಷಾತೀತವಾಗಿ ಬಿಜೆಪಿ ಮುಖಂಡರ ಮೇಲೆ ಒತ್ತಡ ಹಾಕಿದ್ದರೂ ಆ ಸಾಧ್ಯತೆ ಕಡಿಮೆ. ಅಲ್ಲದೇ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರೂ ಬಡಿಗೇರ ಪರವೇ ಇದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂದು ಸಾಯಂಕಾಲ ಹುಬ್ಬಳ್ಳಿಗೆ ಆಗಮಿಸಲಿದ್ದು ತದನಂತರವೇ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.


ರಾತ್ರಿ 8 ಗಂಟೆಗೆ ಪಾಲಿಕೆ ಸದಸ್ಯರ ಸಭೆ ಗೋಕುಲ ರಸ್ತೆಯ ಹೊಟೆಲ್ ಅನಂತ ಗ್ರ್ಯಾಂಡ್‌ದಲ್ಲಿ ಮಹತ್ವದ ಸಭೆ ನಡೆಯಲಿದ್ದು ಜೋಶಿಯವರ ನೇತೃತ್ವದಲ್ಲಿ ನಡೆವ ಸಭೆಯಲ್ಲಿ ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಪಾಲಿಕೆ ಸದಸ್ಯರ ಅಭಿಪ್ರಾಯ ಆಲಿಸಿ ನಾಳೆ ನಾಮಪತ್ರಕ್ಕೆ ಕೆಲವೇ ನಿಮಿಷಗಳ ಮೊದಲು ಅಂತಿಮವಾಗಿ ಪ್ರಕಟಗೊಳ್ಳಲಿದೆ.
ಉಪಮೇಯರ್ ಸ್ಥಾನಕ್ಕೆ ದುರ್ಗಮ್ಮಾ ಶಶಿಕಾಂತ ಬಿಜವಾಡ ಹಾಗೂ ಚಂದ್ರಿಕಾ ವೆಂಕಟೇಶ ಮೇಸ್ತ್ರಿ ಇಬ್ಬರಲ್ಲೊಬ್ಬರು ಎನ್ನುವಂತ ವಾತಾವರಣವಿದ್ದು, ಆದರೆ ದುರ್ಗಮ್ಮ ಬಿಜವಾಡಗೆ ಪಕ್ಷ ಸೇರ್ಪಡೆ ವೇಳೆ ಭರವಸೆ ನೀಡಿದಂತೆ ಅವರನ್ನೇ ಅಂತಿಮಗೊಳಿಸುವುದು ಪಕ್ಕಾ ಆಗಿದೆ. 82 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಮಂದಿ ಪಕ್ಷೇತರ ಹಾಗೂ ಒಬ್ಬ ಜೆಡಿಎಸ್ ಸದಸ್ಯರಿದ್ದಾರೆ. ಕಳೆದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ಬಿಜೆಪಿ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರಿಗೂ ಮತಾಧಿಕಾರ ದೊರಕಿದೆ. ಸ್ಪಷ್ಟ ಬಹುಮತ ಹೊಂದಿರುವದರಿಂದ ಬಿಜೆಪಿ ಬಾವುಟ ಹಾರುವುದು ಪಕ್ಕಾ ಆಗಿದೆ.


ಸಂಖ್ಯಾ ಬಲದ ಕೊರತೆ ಹೊಂದಿರುವ ಕಾಂಗ್ರೆಸ್ ಪಕ್ಷ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ತನ್ನ ಹುರಿಯಾಳುಗಳನ್ನು ಇಳಿಸುವುದು ನಿಶ್ಚಿತವಾಗಿದೆ. ಇಕ್ಬಾಲ ನವಲೂರ ಅಥವಾ ಇಮ್ರಾನ ಯಲಿಗಾರ ಪ್ರಥಮ ಪ್ರಜೆಗೆ ಅಲ್ಲದೇ ಉಪ ಮೇಯರ್ ಸ್ಥಾನಕ್ಕೆ ಸುವರ್ಣಾ ಕಲಕುಂಟ್ಲ, ಮಂಗಳಮ್ಮ ಹಿರೇಮನಿ, ಕವಿತಾ ಕಬ್ಬೇರ ಇವರಲ್ಲಿ ಒಬ್ಬರು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಈಗಾಗಲೇ ಕಾಂಗ್ರೆಸ್ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಸಭೆ ನಡೆಸಿದೆ.

ಸಂಜೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಹಾಗೂ ಶಾಸಕರ ಸಮಕ್ಷಮ ಬಿಜೆಪಿ ಪಾಲಿಕೆ ಸದಸ್ಯರ ಸಭೆ ಕರೆಯಲಾಗಿದ್ದು, ಅಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಗುವುದು.
ತಿಪ್ಪಣ್ಣ ಮಜ್ಜಗಿ, ಮಹಾನಗರ ಅಧ್ಯಕ್ಷ

ಕೇಸರಿ ಸದಸ್ಯರ ಗ್ರ್ಯಾಂಡ್ ವಾಸ್ತವ್ಯ 

ಬಿಜೆಪಿ ಪಾಲಿಕೆ ಸದಸ್ಯರಿಗೆ ಈಗಾಗಲೇ ವಿಪ್ ನೀಡಿದ್ದು ಇಂದು ಸಂಜೆ ನಡೆವ ಸಭೆಯಲ್ಲಿ ಪಾಲ್ಗೊಳ್ಳುವ ಈ ಎಲ್ಲ ಸದಸ್ಯರು ಅನಂತ ಗ್ರ್ಯಾಂಡ್‌ನಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ ಅಲ್ಲಿಯೇ ಮತ್ತೊಂದು ಸುತ್ತು ನಡೆಸಿದ ನಂತರ ನೇರವಾಗಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯುವ ಪಾಲಿಕೆ ಸಭಾಭವನಕ್ಕೆ ಆಗಮಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *