ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅವಳಿನಗರಗಳಾದ ವಾಣಿಜ್ಯ ನಗರಿ ಮತ್ತು ಪೇಡಾನಗರಿಗಳು ಬಹುತೇಕ ಕೇಸರಿಮಯವಾಗಿದ್ದು, ನಗರದ ಪ್ರಮುಖ ವೃತ್ತ ಸೇರಿದಂತೆ ಗಲ್ಲಿಗಲ್ಲಿಯೂ ಕೇಸರಿ ಬಾವುಟಗಳಿಂದ ಕಂಗೊಳಿಸುತ್ತಿದೆ.
ನಗರದ ದೇವಸ್ಥಾನಗಳು, ಮಠ-ಮಂದಿರಗಳು ರಾಮಧ್ವಜ, ಕೇಸರಿ ಬಾವುಟ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ಗ್ರಾಮೀಣ ಭಾಗದ ಗುಡಿ, ಮಂದಿರಗಳನ್ನು ಸಹ ತಳಿರು-ತೋರಣಗಳಿಂದ ಸಿಂಗರಿಸಲ್ಪಟ್ಟಿದ್ದು,ವಿವಿಧ ಸಂಘ- ಸಂಸ್ಥೆಗಳು ಬಡಾವಣೆಗಳಲ್ಲೂ ರಾಮೋತ್ಸವ ಆಚರಿಸುತ್ತಿವೆ.
ದುರ್ಗದಬೈಲ್, ಗಣೇಶಪೇಟೆ, ತುಳಜಾಭವಾನಿ ವೃತ್ತ, ಮೇದಾರ ಓಣಿ, ಗೋಪನಕೊಪ್ಪ ವೃತ್ತ, ದೇವಾಂಗಪೇಟೆ, ಮರಾಠಗಲ್ಲಿ, ವಿಜಯನಗರ, ಗೋಕುಲ ರಸ್ತೆ, ಕೇಶ್ವಾಪುರ ವೃತ್ತ ಸೇರಿದಂತೆ ಅಲ್ಲದೆ ಧಾರವಾಡದ ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ, ಕೇಸರಿ ಪತಾಕೆಗಳಿಂದ ಅಲಂಕರಿಸಲಾಗಿದೆ. ಅನೇಕರು ದ್ವಿಚಕ್ರಗಳಿಗೆ ಮತ್ತು ಅಟೋ ಚಾಲಕರು ರಿಕ್ಷಾಗಳಿಗೆ ರಾಮಧ್ವಜಗಳನ್ನು ಸಿಕ್ಕಿಸಿಕೊಂಡು ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿವೆ.
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶ ಹಾಗೂ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದ್ದು500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಜೊತೆ ಕೆಎಸ್‌ಆರ್‌ಪಿ ತುಕ್ಕಡಿ ಹಾಗೂ 100 ಮಂದಿ ಗೃಹರಕ್ಷಕ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದ್ದು, ಬೆಳಿಗ್ಗೆ 6.30ರಿಂದಲೇ ಗಸ್ತು ಆರಂಭಗೊಂಡಿದೆ.
’ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಬಂದೋಬಸ್ತ ಕೈಗೊಳ್ಳಲಾಗಿದ್ದುಹೊರಗಡೆಯಿಂದ ಮೂರು ಕೆಎಸ್‌ಆರ್‌ಪಿ ತುಕ್ಕಡಿಗಳನ್ನು ತರಸಿಕೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಪೋಸ್ಟ್ ಬಗ್ಗೆ ನಿಗಾ ಇಡಲು ವಿಶೇಷ ತಂಡ ರಚಿಸಲಾಗಿದೆ’ ಎಂದು ಬಂದೋಬಸ್ತ ಉಸ್ತುವಾರಿ ವಹಿಸಿರುವ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿದ್ದಾರೆ.