ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಡಾ ಬಡವರನ್ನು ಹೆದರಿಸುವ ಯತ್ನ ನಿಲ್ಲಿಸಲಿ

ಹುಡಾ ಬಡವರನ್ನು ಹೆದರಿಸುವ ಯತ್ನ ನಿಲ್ಲಿಸಲಿ

ಧಾರವಾಡ: ವಿವಿಧ ವಸತಿ ವಿನ್ಯಾಸಗಳಲ್ಲಿ ವಾಸಿಸುವ ಬಡವರನ್ನು ಹೆದರಿಸುವ ಯತ್ನವನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು ನಿಲ್ಲಿಸದೇ ಹೋದಲ್ಲಿ ನವನಗರ ಕಚೇರಿ ಎದುರು ಧರಣಿ ಮಾಡುವುದು ಅನಿವಾರ್‍ಯವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ಹುಡಾ ವತಿಯಿಂದ ನಡೆಯುತ್ತಿರುವ ಅನಧಿಕೃತ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಲ್ಲ ಸಮುದಾಯದ ಬಡವರ ಕಲ್ಯಾಣದಲ್ಲಿ ಹುಡಾ ಆಸಕ್ತಿ ಹೊಂದಿಲ್ಲ. ಬಿಜೆಪಿಯ ಮುಖಂಡರು ಬಡವರಿಂದ ಹುಡಾ ಮುಂದಿಟ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಡಾ ಅಧ್ಯಕ್ಷರು 2020 ಜನವರಿಯಿಂದ ನೂರಾರು ಅಕ್ರಮ ಲೇಔಟ್‌ಗೆ ಭೇಟಿ ನೀಡಿದ್ದಾರೆ ಅದರಲ್ಲಿ ಎಷ್ಟು ಬಡಾವಣೆಗಳಲ್ಲಿ ಸಕ್ರಮ ಮಾಡಿದ್ದಾರೆ ಅಥವಾ ಮಾಲೀಕರ ಮೇಲೆ ಎಷ್ಟು ಕೇಸ್ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರಲ್ಲದೇ ಪ್ರಾಧಿಕಾರವು ಬಡವರಿಗಾಗಿ ಯಾವುದಾದರೂ ಲೇಔಟ್ ಮಾಡಿ ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡಿದೆಯೇ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದಿದ್ದಾರೆ.
ಲೇಔಟ್ ಸಂಪೂರ್ಣವಾಗಿ ಮಾರಾಟವಾಗುವವರೆಗೆ ಮತ್ತು ಮನೆಗಳನ್ನು ನಿರ್ಮಿಸುವವರೆಗೆ ಪ್ರಾಧಿಕಾರದಿಂದ ಯಾರೂ ಅಲ್ಲಿಗೆ ಬರುವುದಿಲ್ಲ. ಅಲ್ಲಿ ಬಡ ಜನರು ಉಳಿಯಲು ಪ್ರಾರಂಭಿಸಿದ ಕ್ಷಣದಲ್ಲಿ ಅಕ್ರಮ ಬಡಾವಣೆ, ಕಾರ್ಯಾಚರಣೆ ಎಂದು ಹೆದರಿಸುತ್ತಾರಲ್ಲದೇ ಧಾರವಾಡ 71 ಕ್ಷೇತ್ರವನ್ನೇ ಹೆಚ್ಚು ಗುರಿಯಾಗಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಧಾರವಾಡ 71 ಕ್ಷೇತ್ರಕ್ಕೆ ವಾರಸುದಾರರೇ ಇಲ್ಲ ಎನ್ನುವಂತೆ ಪ್ರಾಧಿಕಾರದವರು ನಡೆದುಕೊಂಡಲ್ಲಿ ಕಚೇರಿಗೆ ಮುತ್ತಿಗೆ ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *