ಹುಬ್ಬಳ್ಳಿ-ಧಾರವಾಡ ಸುದ್ದಿ

’ಈದ್ಗಾ ಗಣೇಶ’ ವಿರೋಧಿಸಿದರೆ ಬಿಜೆಪಿಗೆ ತಕ್ಕ ಪಾಠ

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುತಾಲಿಕ್ ಖಡಕ್ ಎಚ್ಚರಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಹಾಗೂ ಸ್ಥಳೀಯ ಶಾಸಕರು ವಿರೋಧ ಹಾಗೂ ತೊಂದರೆ ಕೊಟ್ಟರೆ . ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವಂತೆ ಗಣೇಶ ಮೂರ್ತಿ ಹಿಡಿದು ಮನೆ ಮನೆಗೆ ತೆರಳಿ ತಿಳುವಳಿಕೆಯ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.


ಸದನ ಸಮಿತಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತಿಳಿಸಿದೆ. ಅಗಸ್ಟ್ ೨೯ ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿಯ ರಚನೆ ಅವಶ್ಯಕತೆ ಇರಲಿಲ್ಲ. ಆದರೆ ವಿನಾಕಾರಣ ಕಾಲಹರಣ ಮಾಡಲು ಈ ರೀತಿಯ ನಾಟಕವನ್ನು ಪಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದರು.


ಈಗಾಗಲೇ ಪಾಲಿಕೆಯ ಮೇಯರ್ ಅನುಮತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ರಿಪೋರ್ಟ್ ಇರಬಾರದು ಎಂದು ಕಂಡಿಷನ್ ಹಾಕಲಾಗಿದೆ. ನಾವು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ವಿರೋಧ ಮಾಡಿಲ್ಲ. ಹಾಗೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಈವರೆಗೆ ಯಾರೂ ವಿರೋಧ ಮಾಡಿಲ್ಲ. ಹಾಗೇನಾದರೂ ಸೋಮವಾರ ಅನುಮತಿ ನೀಡಲು ಹಿಂದೇಟು ಹಾಕಿದರೇ ಒತ್ತಾಯ ಪೂರ್ವಕವಾಗಿ ಈದ್ಗಾ ಮೈದಾನ ದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಸರ್ಕಾರ ೧೪೪ ಕಲಂ, ಗುಂಡೆಟ್ಟು, ಲಾಠಿ ಚಾರ್ಜ್ ಮಾಡಿಸಿದರೆ ನಮ್ಮ ಪಟ್ಟು ಬಿಡುವುದಿಲ್ಲ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಅವಕಾಶ ಮಾಡಿ ಕೊಡದೇ ಹೋದರೇ ಮುಂದಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಗಣೇಶ ಮೂರ್ತಿಗೆ ಅವಮಾನ ಮಾಡಿದದವರಿಗೆ ಮತ ಹಾಕಬೇಡಿ ಎಂದು ತಿಳಿಸುತ್ತೇವೆ ಎಂದರು. ಈದಗಾ ಗಣೇಶ ಸಮಿತಿಯ ಹನುಮಂತಸಾ ನಿರಂಜನ, ಸಂತೋಷ ಕಠಾರೆ, ಅಭಿಷೇಕ ನಿರಂಜನ, ಚಂದ್ರು ಕೋಳೂರ ಇನ್ನಿತರರಿದ್ದರು.

ಚವ್ಹಾಣ ನೇತೃತ್ವದ ಸದನ ಸಮಿತಿ ಕಾರ್ಯಾರಂಭ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಸಂತೋಷ ಚವ್ಹಾಣ ನೇತೃತ್ವದ ಸದನ ಸಮಿತಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ರಾಣಿಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.


ನಿನ್ನೆ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾದಂತೆ ಸದನ ಸಮಿತಿ ರಚನೆಗೊಂಡಿದ್ದು ಸ್ವಾಗತಾರ್ಹವಾಗಿದ್ದು, ಪಾಲಿಕೆಯ ಮಾಲಿಕತ್ವದಲ್ಲಿರುವ ಸಿಟಿಎಸ್ ನಂ. ೧೭೪ ಆಸ್ತಿಯ ವಿಷಯವಾಗಿ ೨೦೧೦ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಅಂತಿಮ ನಿರ್ಣಯದಂತೆ ಇದು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಟ್ಟು, ಆ ಮೂಲಕ ಸಂವಿಧಾನದಲ್ಲಿ ಬರೆದಂತೆ ಜಾತ್ಯಾತೀತ ಪದಕ್ಕೆ ಅರ್ಥಬರುವ ರೀತಿಯಲ್ಲಿ ನಾವು ನಡೆದುಕೊಳ್ಳೋಣ. ಹುಬ್ಬಳ್ಳಿಯ ಕೇಂದ್ರ ಸ್ಥಳದಲ್ಲಿ ಗಜಾನನ ಉತ್ಸವ ಆಚರಿಸಿ ಮಾದರಿಯಾಗೋಣ. ಈ ಉತ್ಸವವು ಸಾರ್ವಜನಿಕವಾಗಿ ಆಚರಿಸುವುದು ಉತ್ತಮ. ಪಾಲಿಕೆ ಅಥವಾ ಪಾಲಿಕೆ ಸದಸ್ಯರಿಂದ ಆಚರಿಸಿದರೆ ಮುಂದೆ ಎಲ್ಲ ಹಬ್ಬಗಳು, ಪ್ರಾರ್ಥನೆಗಳನ್ನು ಪಾಲಿಕೆಯಿಂದಲೇ ಆಚರಿಸುವಂತಾಗುವುದು ಅನಿವಾರ್ಯವಾಗುವುದು. ಕಾರಣ ಸೂಕ್ತ ನಿರ್ಣಯ ಕೈಗೊಳ್ಳುವಂತೆ ವಿನಂತಿಸಿದರು.


ಸದನ ಸಮಿತಿಯ ಮೆಣಸಿನಕಾಯಿ, ಬೇದರೆ, ಉಪಮೇಯರ್ ಉಮಾ ಮುಕುಂದ, ಸಮನ್ವಯಾಧಿಕಾರಿ ಬೇವೂರ ಈ ಸಂದರ್ಭದಲ್ಲಿದ್ದರು. ಸಮಿತಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವು ಮೆಣಸಿನಕಾಯಿ, ಸುರೇಶ ಬೇದರೆ, ಕಾಂಗ್ರೆಸ್‌ನ ನಿರಂಜನ ಹಿರೇಮಠ, ಇಮ್ರಾನ್ ಯಲಿಗಾರ ಸದಸ್ಯರಾಗಿದ್ದು, ಪಾಲಿಕೆ ಸಹಾಯಕ ಆಯುಕ್ತ ಎಸ್.ಸಿ.ಬೇವೂರ ಸಮಿತಿ ಸಮನ್ವಯಾಧಿಕಾರಿ ಆಗಿದ್ದಾರೆ.ಸಮಿತಿ ಇಂದಿನಿಂದ ಕಾರ್ಯಾರಂಭ ಮಾಡಿದೆ.
ನಾಗರಿಕರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಲಿದ್ದು ಯಾರಾದರೂ ಅಹವಾಲು ನೀಡುವುದಿದ್ದಲ್ಲಿ ಪಾಲಿಕೆ ಬಂದು ನೀಡುವಂತೆ ಸಂತೋಷ ಚವ್ಹಾಣ ಹೇಳಿದ್ದಾರೆ. ಈ ಬಗ್ಗೆ ಎಲ್ಲರ ಅಭಿಮತ ಆಲಿಸಿ ತಾವು ದಿ.೨೯ರಂದು ಬೆಳಿಗ್ಗೆ ೧೧ಗಂಟೆ ಸಂಪೂರ್ಣ ವರದಿ ನೀಡುವುದಾಗಿ ಹೇಳಿದರು.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಮೇಯರ್ ಈರೇಶ ಅಂಚಟಗೇರಿ
ಸಮಿತಿಯು ಎಲ್ಲಾ ಆಯಾಮ ಗಳಿಂದಲೂ ಪರಿಶೀಲನೆ ನಡೆಸಿ ನೀಡುವ ವರದಿ ಆಧಾರದ ಮೇಲೆ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು. ಕಾನೂನು ಪರಿಣಿತರ ಅಭಿಪ್ರಾಯ ಸಹ ಪಡೆದೆ ನಿರ್ಣಯಿಸಲಾಗುವುದು ಎಂದರು.

 

 

administrator

Related Articles

Leave a Reply

Your email address will not be published. Required fields are marked *