ಹುಬ್ಬಳ್ಳಿ: ಧಾರವಾಡ ಶಹರ ಠಾಣೆಯ ಇನ್‌ಸ್ಪೆಕ್ಟರ್ ಎನ್.ಸಿ.ಕಾಡದೇವರಮಠ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡು, ಸಾರ್ವಜನಿಕ ವಾಗಿ ಅವಮಾನಿಸಿದ್ದನ್ನು ಸಮತಾ ಸೇನಾ ಕರ್ನಾಟಕ ಸಂಘಟನೆ ಖಂಡಿಸಿದೆ.
ಈ ಹಿಂದೆ ರಾಜ್ಯದಲ್ಲಿ ತಮ್ಮ ಸರ್ಕಾರ ಇದ್ದಾಗ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಗೂಂಡಾ ಕಾಯ್ದೆಯಡಿ ಬಂಧಿಸಿದ್ದನ್ನು ಕೇಂದ್ರ ಸಚಿವರು ಮರೆತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಜನಸ್ಪಂದನ ಹೆಸರಲ್ಲಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸಿದ್ದು ಸರಿಯಲ್ಲ’ ಎಂದು ಸಂಘಟನೆಯ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದ್ದಾರೆ.
’ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಜನಪ್ರತಿನಿಧಿಗಳಿಗೆ ಸಂವಿಧಾನಬದ್ಧವಾದ ಹಲವು ವೇದಿಕೆಗಳಿವೆ. ಅದನ್ನು ಅನುಸರಿಸದೆ ತಮ್ಮ ಹುದ್ದೆಯ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.
ಕೇಂದ್ರ ಸಚಿವರು ಸಂವಿಧಾನವನ್ನು ಗೌರವಿಸುವುದಾದರೆ ಕೂಡಲೇ ಪೊಲೀಸ್ ಅಧಿಕಾರಿಯ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.