ಹುಬ್ಬಳ್ಳಿ: ರಾಜ್ಯದಲ್ಲಿ ’ಗೃಹಲಕ್ಷ್ಮೀ’ ಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೂ ಅವರ ಲೈಸೆನ್ಸ್ ರದ್ದು ಮಾಡಲಾಗುವುದು. ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಹಣ ಕೊಡುವಂತಿಲ್ಲ. ನನ್ನ ಕ್ಷೇತ್ರದ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಯಾರಾದರೂ ಹಣ ಪಡೆದ ಬಗ್ಗೆ ಮಾಹಿತಿ ಬಂದರೇ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದರು.
ಧಾರಾವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಬೆಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಳೆಗೆ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಅಂದಾಜು ನಮಗೆ ಸಿಕ್ಕಿಲ್ಲ. ಮಳೆ ಇನ್ನೂ ಹೆಚ್ಚಾದರೆ ರೈತರಗೆ ಅನಾನುಕೂಲ ಆಗಲಿದೆ. ಧಾರವಾಡ ಜಿಲ್ಲೆಯ ಸ್ಲಂಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಇವತ್ತು ಮುಖ್ಯಮಂತ್ರಿಗಳು ಹಾವೇರಿಗೆ ಬರುತ್ತಿದ್ದಾರೆ. ಅವರೊಂದಿಗೆ ಚರ್ಚೆ ಮಾಡುತ್ತೇವೆ. ಬಹಳ ವರ್ಷಗಳಿಂದ ಈ ಸಮಸ್ಯೆ ಇದೆ. ಸರ್ಕಾರದಿಂದ ಏನ ಸಹಾಯ ಮಾಡಬೇಕು ಅದನ್ನು ನಾವ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಮಳೆ ಆಗಲ್ಲ ಎಂಬ ಮಾತಿನ ವಿಚಾರವಾಗಿ ಮಾತನಾಡಿದ ಅವರು ಈ ತರಹದ ವಾಡಿಕೆಗೆ ದೇವರು ಉತ್ತರ ಕೊಟ್ಟಿದ್ದಾನೆ ಎಂದರು.
ಸಿಂಗಪುರದಲ್ಲಿ ಸರ್ಕಾರದ ವಿರುದ್ಧ ತಂತ್ರ ಮಾಡುತ್ತಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಯವರದು ಯಾವಾಗಲೂ ಇಷ್ಟೆ. ಯಾವಾಗ ಸೋಲುತ್ತಾರೆ, ಅಲ್ಲಿಂದ ಸರ್ಕಾರ ಬಿಳಸೋಕೆ ಕೆಲಸ ಆರಂಭಿಸುತ್ತಾರೆ. ಹೇಗೆ ಸರ್ಕಾರ ಬೀಳಸಬೇಕು ಎಂದು ಬಿಜೆಪಿ ಮನಿಫ್ಯಾಕ್ಚರಿಂಗ್ ಯುನಿಟ್ ಕೆಲಸ ಮಾಡತ್ತೆ. ಇದಕ್ಕೆ ಉದಾಹರಣೆ ಸಾಕಷ್ಟಿವೆ. ಕಳೆದ ಬಾರಿ ಕರ್ನಾಟಕ, ಮಧ್ಯಪ್ರದೇಶ, ಗೋವಾದಲ್ಲಿ ಮಾಡಿದರು. ಈ ಮಾರ್ಗ ಬಿಟ್ಟರೇ ಬೇರೆ ಯಾವ ಮಾರ್ಗ ಇಲ್ಲ ಎಂದು ಕಾಲೆಳೆದರು.