ವಲಸಿಗರ ಬಾಲ ಕಟ್ ಮಾಡುತ್ತೇವೆ : ಈಶ್ವರಪ್ಪ
ಮುಂದುವರಿದ ಬಿಜೆಪಿ ಆಂತಃಕಲಹ
ಅಕ್ಕಿ: ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ: ಪ್ರಹ್ಲಾದ ಜೋಶಿ
ಬಡವರಿಗೆ ಕಾಂಗ್ರೆಸ್ ಟೋಪಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸದ್ಯ ಮುಕ್ತಾಯಗೊಳ್ಳುವ ಲಕ್ಷಣ ಕಾಣುತಿಲ್ಲವಾಗಿದ್ದು ನಿನ್ನೆ ಬೆಳಗಾವಿಯಲ್ಲಿ ಪಕ್ಷದ ಸಮಾವೇಶದ ವೇದಿಕೆಯಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವರಾಜ ಯತ್ನಾಳ ಮಧ್ಯೆ ವಾಕ್ಸಮರ ನಡೆದಿದ್ದರೆ ಇಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎದುರೆ ಆಪರೇಶನ್ ಕಮಲ ಮೂಲಕ ಕೇಸರಿ ಸರ್ಕಾರ ಬರಲು ಕಾರಣರಾದ ಬಾಂಬೆ ಬಾಯ್ಸ್ ಬಗ್ಗೆ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸದ್ಯ ಅಶಿಸ್ತು ಮೂಡಿದೆ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಶಿಸ್ತು ಮೂಡಲು ಕಾರಣ. ಅಶಿಸ್ತು ತೋರುವವರ ಬಾಲವನ್ನು ಕಟ್ ಮಾಡ್ತೇವೆ ಎಂದು ಕಿಡಿ ಕಾರಿದ್ದಾರೆ.
ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಪರೇಷನ್ ಕಮಲ ಮುಳುವಾಯ್ತು. ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿರುವುದಕ್ಕೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ನ ಗಾಳಿ ಸೋಕಿರುವುದರಿಂದ ಬಿಜೆಪಿಯಲ್ಲಿ ಅಲ್ಲಲ್ಲಿ ಶಿಸ್ತು ಕಳೆದು ಹೋಗಿದೆ. ಬಹಿರಂಗವಾಗಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಇಂತಹದ್ದೆನ್ನಲ್ಲ ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡಬೇಕು. ಬಹಿರಂಗ ಹೇಳಿಕೆ ಕೊಡುವ ಬಗ್ಗೆ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದರು.
ಇನ್ನು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಕಾರ್ಯಕರ್ತರು ನಿರಾಶೆಯಲ್ಲಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಹಾನಗರ ಅಧ್ಯಕ್ಷ ಸಂಜಯ ಕಪಟಕರ,ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ ಹಾನಗಲ್, ರವಿನಾಯಕ ಇದ್ದರು.
ಬಡವರಿಗೆ ಕಾಂಗ್ರೆಸ್ ಟೋಪಿ
ಹುಬ್ಬಳ್ಳಿ: ಕಾಂಗ್ರೆಸ್ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ ಮುನ್ನ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಗ್ಯಾರಂಟಿ ಜಾರಿಯಾಗಿಲ್ಲ ಎಂದು ಈಶ್ವರಪ್ಪ ಆರೋಪಿಸಿದರು.
ಕೈ ಸರ್ಕಾರ ಮಾತು ಕೊಟ್ಟಂತೆ ಅಕ್ಕಿ ಕೊಡ ಲಾಗದೇ ಈಗ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿ ದ್ದಾರೆ. ಮೊದಲನೇ ಕ್ಯಾಬಿನೆಟ್ನಲ್ಲಿಯೇ ಯುವಕರಿಗೆ ಮೋಸ ಮಾಡಿದ್ದಾರೆ. ರಾಜ್ಯದ ಒಬ್ಬ ಯುವಕನಿಗೂ ಹಣ ಕೊಟ್ಟಿಲ್ಲ. ಮನೆ ಯಜಮಾನಿ ಖಾತೆಗೆ ಇನ್ನೂ ಹಣ ಹಾಕಿಲ್ಲ ಎಂದು ಗುಡುಗಿದರು.
ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆ ಎಂದು ಹೇಳಿ ಬಡವರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗೋಷ್ಠಿಯಲ್ಲಿ ಮಹಾನಗರ ಅಧ್ಯಕ್ಷ ಸಂಜಯ ಕಪಟಕರ,ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ ಹಾನಗಲ್, ರವಿನಾಯಕ ಇದ್ದರು.
ಅಕ್ಕಿ: ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ: ಪ್ರಹ್ಲಾದ ಜೋಶಿ
ಹುಬ್ಬಳ್ಳಿ: ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ನಮ್ಮ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಬೇಕು. ಪದೇ ಪದೇ 10ಕೆಜಿ ಅಕ್ಕಿಗೆ ಅಡ್ಡಗಾಲು ಹಾಕುತ್ತಿದ್ದೇವೆ ಅನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೇ 2ರಂದು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ 5 ಕೆಜಿ ಕೊಡುತ್ತಿದೆ, ನಾವು 5 ಕೆಜಿ ಕೊಡುತ್ತೇವೆ ಅಂತ ಹೇಳಲಿ. ನಿಮಗೆ ಅಕ್ಕಿ ಬೇಕಾದರೇ ಕೇಂದ್ರ ಸರ್ಕಾರದ ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ದಾಸ್ತಾನು ಅವಶ್ಯಕವಿದೆ. ಕಾಂಗ್ರೆಸ್ ಮೊದಲು ಸುಳ್ಳು ಹೇಳೋದು ಬಂದ್ ಮಾಡಲಿ ಎಂದರು.