ಲಕ್ಷ ಕೊಟ್ಟರೆ..ಸರ್ಕಾರಕ್ಕೆ ’ಕೋಟಿ’ ವಂಚನೆ
ದಾಖಲೆಗಳಿದ್ದರೂ ಅನಗತ್ಯ ಕೊಕ್ಕೆ – ಮಿತಿ ಮೀರಿದ ಏಜೆಂಟರ ಹಾವಳಿ
ಹುಬ್ಬಳ್ಳಿ: ನಗರದ ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಉಪ ನೋಂದಣಿ ಕಚೇರಿ ( ದಕ್ಷಿಣ )ಯಲ್ಲಿ ಯಾವುದಾದರೊಂದು ಕಾಗದ ನೊಂದಾಗಬೇಕಾದರೆ ಅದು ಸುಲಭದ ಮಾತಲ್ಲ.ಬೇಕಾದ ಅಗತ್ಯ ದಾಖಲೆಗಳೊಂದಿಗೆ ಹೋದರೂ ಅದಕ್ಕೊಂದು ಕೊಕ್ಕೆ ಹಾಕಿ ವಿಳಂಬ ಮಾಡುವುದು ಇಲ್ಲಿ ಸಾಮಾನ್ಯ ಎಂಬಂತಾಗಿದ್ದು ಇದರಿಂದ ಜನಸಾಮಾನ್ಯರು, ಡೆವಲಪರ್ಸಗಳಂತೂ ಹೈರಾಣಾಗಿ ಹೋಗಿದ್ದಾರೆ.
ವಾಣಿಜ್ಯ ರಾಜಧಾನಿಯ ಅತ್ಯಂತ ಫಲವತ್ತಾದ ಹಿರಿಯ ಉಪ ನೊಂದಣಾ ಕಚೇರಿ ಹಿರಿಯ ಉಪನೋಂದಣಿ ಅಧಿಕಾರಿಯ ವರ್ತನೆಯಿಂದ ಸ್ವತಃ ಕಚೇರಿ ಸಿಬ್ಬಂದಿಯೂ ರೋಸಿ ಹೋಗಿದ್ದು,ಮದ್ಯವರ್ತಿಗಳ ಹಾವಳಿಯಂತೂ ಮಿತಿ ಮೀರಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾದರೂ ಲೋಕಾಯುಕ್ತ ಅಧಿಕಾರಿಗಳಿಗೆ ಇಲ್ಲಿಯ ರಾಜಾರೋಷ ವಹಿವಾಟು ಕಣ್ಣಿಗೆ ಕಾಣದಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಈ ಕಚೇರಿಯಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರಕ್ಕೆ ರಾಜ್ಯ ಸರ್ಕಾರ ಸ್ಟಾಂಪ್ ಡ್ಯೂಟಿ ಫಿಕ್ಸ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ, ಸರ್ಕಾರಕ್ಕೆ ಸಂದಾಯ ಮಾಡಬೇಕಿರುವ ಸ್ಟಾಂಪ್ ಡ್ಯೂಟಿಯನ್ನು ವಂಚಿಸಿ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಲಕ್ಷ ಕೊಟ್ಟರೆ ಸರ್ಕಾರಕ್ಕೆ ’ಕೋಟಿ’ ವಂಚನೆ ನಿರಾಯಾಸ ಎಂಬ ಮಾತು ಮಿನಿ ವಿಧಾನಸೌಧದ ಗೋಡೆಗಳಿಂದಲೇ ಕೇಳಿಬರುತ್ತಿದೆ.
ಲಕ್ಷಗಟ್ಟಲೇ ಲಂಚ ನೀಡಲು ಸರಿಯೆಂದಾದಲ್ಲಿ ಕೋಟಿಗಟ್ಟಲೇ ವಂಚಿಸುವ ಪ್ರತಿಯೊಂದು ಮಗ್ಗಲುಗಳನ್ನು ಪರಿಚಯಿಸಲು ಸ್ವತಃ ಹಿರಿಯ ಅಧಿಕಾರಿ ಮತ್ತು ಅವರ ನಿಷ್ಟ ಸಿಬ್ಬಂದಿ ನಿಮಗೆ ಎಲ್ಲ ನೀಲಿ ನಕ್ಷೆ ತಯಾರಿಸಿ ದಾರಿ ಮಾಡಿಕೊಡುತ್ತಾರೆ.
ಸರ್ಕಾರ ಬೊಕ್ಕಸಕ್ಕೆ ಹಣಕಾಸಿನ ಮೂಲಾಧಾರವಾಗಿರುವ ನೋಂದಣಿ ಕಚೇರಿಯಲ್ಲಿ ದಿನಂಪ್ರತಿ ದೊಡ್ಡ ಮೊತ್ತದ ರಾಜಸ್ವ ಸಂಗ್ರಹವಾಗುತ್ತಿದ್ದು ಆದರೆ ಸರ್ಕಾರವನ್ನು ವಂಚಿಸಿ ಅಷ್ಟೆ ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಅಧಿಕಾರಿಗಳು ಹಾಗೂ ಮದ್ಯವರ್ತಿಗಳು ನಡೆಸಿದ್ದು, ಮದುವೆ ನೋಂದಣಿ, ಟ್ರಸ್ಟ್ ನೋಂದಣಿ, ಆಸ್ತಿ ನೋಂದಣಿ ಹೀಗೆ ಅನೇಕ ಕೆಲಸಗಳಿಗೆ ಬರುವ ಜನತೆ ನೇರವಾಗಿ ಇಲ್ಲಿಗೆ ಬಂದರೆ ಯಾವುದೆ ಕೆಲಸ ಆಗದು. ಇದು ಎಲ್ಲ ನೋಂದಣಿ ಕಚೇರಿಗಳಲ್ಲಿ ಇರುವ ಮಾತಾದರೂ ದಕ್ಷಿಣ ನೋಂದಣಿ ಕಚೇರಿಯಲ್ಲಿ ಮಾತ್ರ ಇದು ಮಿತಿ ಮೀರಿದೆ.
ಸಾಮಾನ್ಯ ಜನತೆಯ ದೂರಿನ ಹಿನ್ನೆಲೆಯಲ್ಲಿ ಕಳೆದ ಮಾರ್ಚ ೧೬ರಂದು ರಾಜ್ಯ ಸರ್ಕಾರ ’ ಜನರಲ್ ಟ್ರಾನ್ಸಫರ್’ ಅಡಿಯಲ್ಲಿ ಇಲ್ಲಿನ ಹಿರಿಯ ಉಪನೋಂದಣಾಧಿಕಾರಿ ಸಹದೇವ ರೆಡ್ಡಿ ಬಿ. ಕೋಟಿಯವರನ್ನು ರಾಮದುರ್ಗದ ಉಪ ನೋಂದಣೀ ಕಚೇರಿಯ ಖಾಲಿ ಹುದ್ದೆಗೆ ವರ್ಗಾಯಿಸಲಾಗಿದ್ದರೂ ತಮ್ಮ ವರ್ಗಾವಣೆಯ ವಿರುದ್ದ ’ಕೆಎಟಿ’ಯಿಂದ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದಾರೆ ಎಂಬ ಮಾತುಗಳು ಕಚೇರಿ ಆವರಣದಲ್ಲಿ ಕೇಳಿ ಬರಲಾರಂಭಿಸಿವೆ.
ಸ್ವಹಿತಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ಹಾನಿಯುಂಟು ಮಾಡುವುದಲ್ಲದೇ ಇಡೀ ಸರ್ಕಾರಿ ವ್ಯವಸ್ಥೆಯನ್ನೆ ಭ್ರಷ್ಟಾಚಾರದಲ್ಲಿ ಮುಳುಗಿಸಲು ಮುಂದಾಗಿರುವ ಇಂತಹ ಅಧಿಕಾರಿಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕೆಂಬುದು ಜನ ಸಾಮಾನ್ಯರ ಆಗ್ರಹವಾಗಿದೆ.
ಈ ಹಿಂದೆ ವಿದ್ಯಾನಗರದ ನೇಕಾರಭವನದಲ್ಲಿರುವ ಮಹಿಳಾ ಮಣಿಯ ಚಕ್ಕಳ ಬಕ್ಕಳ ಹಾಕಿ ಊಟ ಮಾಡುವ ಪರಿ ನೋಡಿ ಹಿಂದೆ ಡೆವಲಪರ್‌ಗಳು, ವಕೀಲರು, ಕ್ರೆಡಾಯ್ ಸದಸ್ಯರು ಸೇರಿ ಧರಣಿ ನಡೆಸಬೇಕಾಗಿ ಬಂದಿತ್ತು. ಇಲ್ಲಿಯೂ ಅಂತಹ ಪ್ರತಿಭಟನೆ ಅನಿವಾರ್ಯ ಎಂಬ ಮಾತು ರಿಯಲ್ ಎಸ್ಟೇಟ್ ವಲಯದಿಂದ ಕೇಳಿ ಬಂದಿದೆ.
ಸಾರ್ವಜನಿಕರ ಸೇವೆಯಲ್ಲಿ ಯಾವುದೇ ವಿಳಂಬ ಕಚೇರಿಯಿಂದ ಆಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಕೆಲ ಸಲ ತಡವಾಗುತ್ತದೆ ಎಂಬ ಹೇಳಿಕೆ ಹಿರಿಯ ಉಪ ನೋಂದಣಾಧಿಕಾರಿ ಕೋಟಿಯವರದ್ದಾಗಿದೆ.
ತಾವೇ ಮಾಡಿದ ಟ್ರಸ್ಟ್ ಡೀಡ್‌ನ ತಿದ್ದುಪಡಿಗೆ ನಿರಾಕರಿಸಿ ಅದಕ್ಕೆ ಇಲ್ಲದ ಕಾರಣ ಹೇಳಿ ಸುಮಾರು ೬ತಿಂಗಳ ಸತಾಯಿಸಿ, ನಂತರ ’ಪ್ರಸಾದ’ ಸ್ವೀಕರಿಸಿ ಮಾಡಿ ಕೊಟ್ಟ ಉದಾಹರಣೆಗಳೂ ಇವೆ.
ದಕ್ಷಿಣ ಉಪ ನೋಂದಣಾಧಿಕಾರಿಗಳು ಅನಗತ್ಯ ಕಿರಿ ಕಿರಿ ಮಾಡುತ್ತಲೆ ಇರುವುದು ನಮ್ಮಂತೆ ಹಲವು ಡೆವಲಪರ್‌ಗಳಿಗೂ ಆಗಿದೆ. ವರ್ಗಾವಣೆಯಾದರೂ ಇಲ್ಲಿಯೇ ಮುಂದುವರಿದಿದ್ದು ಕೂಡಲೇ ಸರ್ಕಾರ ನಿಯೋಜಿತ ಸ್ಥಳಕ್ಕೆ ಕಳುಹಿಸಬೇಕು.
ವಿರೇಶ ಉಂಡಿ
ದುರ್ಗಾ ಡೆವಲಪರ್ಸ, ವ್ಯವಸ್ಥಾಪಕ ನಿರ್ದೇಶಕರು
ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ವಿನಾಕಾರಣ ನೆಪ ಹೇಳಿ ಸುಲಿಗೆಗೆ ಇಳಿಯುವುದು ಹೊಸದಲ್ಲ. ಆದರೆ ದಕ್ಷಿಣ ಉಪ ನೋಂದಣಿ ಕಚೇರಿಯಲ್ಲಿ ಅದು ಮಿತಿ ಮೀರಿದೆ. ಇ ಸ್ವತ್ತು ಬಂದ ನಂತರವಂತೂ ಹಿರಿಯ ಅಧಿಕಾರಗಳ ಹಸ್ತ ಕ್ಷೇಪ ವ್ಯಾಪಕವಾಗಿದೆ. ಅಲ್ಲದೇ ಕನಿಷ್ಠ ಮೂಲಭೂತ ಸೌಲಭ್ಯಗಳನ್ನಾದರೂ ಕಲ್ಪಿಸುವಂತಾಗಬೇಕು.
ಸುರೇಶ ಕಿರೇಸೂರ ಎಸಿಸಿಇ ಮಾಜಿ ಅಧ್ಯಕ್ಷರು.