ಹುಬ್ಬಳ್ಳಿ: ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದ ನಾನು ಅಲ್ಲಿ ಪಕ್ಷದ ಯಾವುದೇ ಮುಖಂಡರನ್ನು ಭೇಟಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖಂಡರ ಕರೆ ಮೇರೆಗೆ ಅಥವಾ ಪಕ್ಷದ ಮುಖಂಡರನ್ನು ಭೇಟಿಯಾಗಲು ಹೋಗಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹಿತ ಯಾರನ್ನೂ ಕಂಡು ಚರ್ಚೆ ಮಾಡಿಲ್ಲ ಎಂದರು.
ಜಾರ್ಖಂಡಗೆ ತೆರಳಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಭೇಟಿಯಾಗಿಲ್ಲ.ಇಂದು ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದು, ನಾಳೆ ಸಂಜೆ ಹುಬ್ಬಳ್ಳಿಗೆ ಬರುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಬಂದ ಮರುದಿನವೇ ಶುಕ್ರವಾರ ಜಗದೀಶ ಶೆಟ್ಟರ್ ಅವರು ದೆಹಲಿಗೆ ತೆರಳಿರುವುದಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆಯಲ್ಲದೇ ನಡ್ಡಾ ರಹಸ್ಯವಾಗಿ ಭೇಟಿಯಾಗಿದ್ದರೆಂಬ ಮಾತುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.