ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ವಾಪಸಾದ ಮರುದಿನವೇ ದಿಢೀರ್ ಆಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರಾಷ್ಟ್ರ ರಾಜಧಾನಿಗೆ ತೆರಳಿರುವುದು ದೊಡ್ಡ ಸದ್ದು ಮಾಡುತ್ತಿದೆ.
ವೈಯಕ್ತಿಕ ಕೆಲಸದ ಮೇಲೆ ಬಂದಿರುವುದಾಗಿ ಶೆಟ್ಟರ್ ಸ್ಪಷ್ಟಪಡಿಸಿದ್ದರೂ ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಜತೆ ಥಳುಕು ಹಾಕಿಕೊಂಡು ಶೆಟ್ಟರ್ ವಿಷಯ ಸದ್ದು ಮಾಡುತ್ತಿದೆ.
ಶೆಟ್ಟರ್ ಅವರು ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಬಿ.ಎಲ್ ಸಂತೋಷ ಯಾರೂ ಇಲ್ಲವಾಗಿದ್ದು ಮಧ್ಯಾಹ್ನದವರೆಗೆ ಯಾರನ್ನೂ ಭೇಟಿಯಾಗಿಲ್ಲವಾಗಿದೆ.
ಸಂಜೆ ಪಕ್ಷದ ಪ್ರಮುಖರು ವಾಪಸಾಗುವ ನಿರೀಕ್ಷೆಯಿದ್ದು ಶೆಟ್ಟರ್ ಈ ನಾಯಕರನ್ನು ಭೇಟಿಯಾಗಬಹುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಬಿಟ್ ಕಾಯಿನ್ ಹಗರಣದ ಒಂದೊಂದೆ ಅಧ್ಯಾಯ ಬಿಡುಗಡೆ ಮಾಡಲಾರಂಬಿಸಿದ್ದು, ಅಲ್ಲದೇ ಆಡಳಿತ ಪಕ್ಷಕ್ಕೆ ಇಕ್ಕಟ್ಟು ತಂದಿಡುವಂತಹ ಹೆಜ್ಜೆ ಇಡುತ್ತಿರುವುದರಿಂದಲೇ ಶೆಟ್ಟರ್ ಅನ್ನು ವರಿಷ್ಠರೇ ಕರೆಸಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿರುವುದು ರಾಜ್ಯದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದಂತಾಗಿದೆ.
ಪ್ರದೀಪ್‌ಗೆ ಟಿಕೆಟ್ ಗ್ಯಾರಂಟಿ?
ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ
ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿದ್ದು ಮರು ಆಯ್ಕೆ ಬಯಸಿದ್ದು ಅವರಿಗೆ ಟಿಕೆಟ್ ಗ್ಯಾರಂಟಿ ಎಂದೇ ಹೇಳಲಾಗುತ್ತಿದ್ದರೂ ಕುಟುಂಬದವರಿಗೆ ಟಿಕೆಟ್ ನೀಡಬಾರದೆಂಬ ನಿರ್ಧಾರಕ್ಕೆ ಬಿಜೆಪಿ ಪ್ರಮುಖರು ಬಂದ ಹಿನ್ನೆಲೆಯಲ್ಲಿ ತೆರಳಿ ಖಚಿತ ಪಡಿಸಲು ಜಗದೀಶ ಶೆಟ್ಟರ್ ಬಂದಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಲಿಂಗರಾಜ ಪಾಟೀಲ, ಪಾಲಾಕ್ಷಗೌಡ ಪಾಟೀಲ, ಎಂ.ಎಸ್.ಕರಿಗೌಡರ ಸಹಿತ ಅನೇಕರ ಹೆಸರು ಪರಿಷತ್ ಸ್ಥಾನಕ್ಕೆ ಕೇಳಿ ಬಂದಿವೆ.