ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ಮಾಜಿ ಸಿಎಂ: ದಿಲ್ಲಿಯಲ್ಲಿ ಸೇರ್ಪಡೆ
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಿರ್ಣಾಯಕ ಪಾತ್ರ
ಸೇರ್ಪಡೆ ವೇಳೆ ಇಲ್ಲದ ಪ್ರಹ್ಲಾದ ಜೋಶಿ!
ಧಾರವಾಡ ಲೋಕಸಭಾ ಟಿಕೆಟ್ಗೆ ಬೇಡಿಕೆ?
ವಿರೇಶ ಉಂಡಿ ಕಮಲ ಪಡೆಗೆ?
ಹೊಸದಿಲ್ಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಮರಳಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇಂದು ಹೊಸದಿಲ್ಲಿ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ನಾನು ಬಿಜೆಪಿಗೆ ಮರಳಬೇಕು ಎಂಬುದು ಹಲವು ನಾಯಕರ ಅಪೇಕ್ಷೆ ಇತ್ತು. ಅದರಂತೆ ಇಂದು ಅಧಿಕೃತವಾಗಿ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಮತ್ತೆ ಕಮಲದ ಶಾಲು ಹೊದ್ದು ಮರು ಸೇರ್ಪಡೆಯಾದ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ನಾನು ಪಕ್ಷಕ್ಕೆ ವಾಪಾಸ್ ಆಗಬೇಕು ಎಂದು ನಾಯಕರು ಬಯಸಿದ್ದರು. ಅಮಿತ್ ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ನಾನು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸವಾಗಿದೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ, ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ನನ್ನ ಅಸೆ ಕಳೆದ ಹತ್ತು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ, ಅವರ ಅಭಿವೃದ್ಧಿ ಕೆಲಸದ ಮೂಲಕ ಭಾರತ ಮುನ್ನಡೆಯಬೇಕು ಎಂಬುದು ನನ್ನ ಅಸೆ ಹಾಗಾಗಿ ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ್ದಾಗ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ಕೆಲ ದಿನಗಳ ಹಿಂದೆ ಬಿಜೆಪಿ ನನಗೆ ಮೋಸ ಮಾಡಿದ್ದು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದಿದ್ದ ಶೆಟ್ಟರ್ರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಕೆಲ ನಾಯಕರು ಭೇಟಿ ಮಾಡಿದ್ದಾರೆನ್ನುವ ಗುಸು ಗುಸು ನಿನ್ನೆ ಇತ್ತಾದರೂ ಇಂದೇ ಸೇರ್ಪಡೆಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಜಗದೀಶ್ ಶೆಟ್ಟರ್ ಅವರು ದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಶೆಟ್ಟರ್ ಮನವೋಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮರಳಲು ಶೆಟ್ಟರ್ ಒಪ್ಪಿಗೆ ಸೂಚಿಸಿದ ನಂತರ ದಿಲ್ಲಿಯ ಕಚೇರಿಯಲ್ಲಿ ಭೂಪೇಂದ್ರ ಯಾದವ, ಯಡಿಯೂರಪ್ಪ, ರಾಜೀವ ಚಂದ್ರಶೇಖರ, ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಶೆಟ್ಟರ್ರನ್ನು ಪುನಃ ಪಕ್ಷಕ್ಕೆ ಹರ್ಷದಿಂದ ಸ್ವಾಗತಿಸುತ್ತೇವೆ. ಕರ್ನಾಟಕದಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ಅವರು ಕಾರ್ಯನಿರ್ವಹಿಸಲಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ ಹೇಳಿದರು.
ಹಿಂದೆ ಮುಖ್ಯಮಂತ್ರಿಯಾದಿಯಾಗಿ ಅನೇಕ ಜವಾಬ್ದಾರಿ ವಹಿಸಿಕೊಂಡು ದುಡಿದವರು. ಅವರು ಪಕ್ಷಕ್ಕೆ ಬರಲಿ ಎನ್ನುವ ವಿಚಾರ ಇತ್ತು. ಅದರಂತೆ ಇಂದು ಬೆಳಗ್ಗೆ ಸೇರಿದ್ದಾರೆ. ಲೋಕಸಭಾ ಚುನಾವಣೆವೇಳೆ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಿರ್ಣಾಯಕ ಪಾತ್ರ
ವಿಧಾನಸಭಾ ಚುನಾವಣೆ ನಂತರ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ನವಲಗುಂದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ಗೆ ಸೇರುವರೆಂಬ ಗುಸು ಗುಸು ಹುಸಿಯಾಗಿ ತಮ್ಮ ಗಾಡಫಾದರ್ ಆದ ಶೆಟ್ಟರ್ಅನ್ನೇ ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಜತೆ ಸಂಪರ್ಕ ಹೊಂದಿದ್ದ ಮುನೇನಕೊಪ್ಪ ಯತ್ನ ಶೆಟ್ಟರ್ ಕರೆ ತರುವಲ್ಲಿ ಮಹತ್ವದ್ದು ಎಂದು ಹೇಳಲಾಗುತ್ತಿದೆ.
ಇದರೊಂದಿಗೆ ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಮತ್ತೊಂದು ಟ್ವಿಸ್ಟ್ ಬಂದಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕಾಗಿದೆ. ಶೆಟ್ಟರ್ ಸೇರ್ಪಡೆ ವೇಳೆ ಪ್ರಭಾವಿ ಕೇಂದ್ರ ಸಚಿವ ಜೋಶಿಯವರ ಗೈರು ಎದ್ದು ಕಾಣುವಂತಾಗಿದೆ.
ವಿರೇಶ ಉಂಡಿ ಕಮಲ ಪಡೆಗೆ?
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರ್ಪಡೆ ಹಿಂದೆಯೇ ನಗರದ ಕಾಂಗ್ರೆಸ್ ಮುಖಂಡ , ದುರ್ಗಾ ಡೆವಲಪರ್ಸ ವ್ಯವಸ್ಥಾಪಕ ನಿರ್ದೇಶಕ ವಿರೇಶ ಉಂಡಿ ಸಹಿತ ಹಲವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದ ಉಂಡಿಯವರು ಪ್ರಭಾವಿ ಪಂಚಮಸಾಲಿ ಮುಖಂಡರಾಗಿದ್ದು, ಉತ್ತಮ ಸಂಘಟಕರಾಗಿದ್ದಾರೆ. ಇನ್ನೂ ಕೆಲ ಕಾಂಗ್ರೆಸ್ ಮುಖಂಡರುಗಳು ಕೈಗೆ ರಾಜೀನಾಮೆ ಹೇಳಿ ಬಿಜೆಪಿ ಸೇರುವರೆನ್ನಲಾಗಿದೆ.
ಸೇರ್ಪಡೆ ವೇಳೆ ಇಲ್ಲದ ಪ್ರಹ್ಲಾದ ಜೋಶಿ!
ಜಗದೀಶ ಶೆಟ್ಟರ್ ಹೊಸದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಯಾಗಿದ್ದರೂ ಪ್ರಸಕ್ತ ಕೇಂದ್ರ ಕ್ಯಾಬಿನೆಟ್ನಲ್ಲಿ ಮೂರನೇ ಸ್ಥಾನ ಹೊಂದಿರುವ ಹುಬ್ಬಳ್ಳಿಯವರೇ ಆದ ಪ್ರಹ್ಲಾದ ಜೋಶಿ ಪಾಲ್ಗೊಳ್ಳದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸಹ ದಿಲ್ಲಿಯಲ್ಲೇ ಇದ್ದರೂ ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಯಡಿಯೂರಪ್ಪ ಬಣದವರು ಮಾತ್ರ ಶೆಟ್ಟರ್ ಸೇರ್ಪಡೆಗೆ ಉತ್ಸುಕರಾಗಿದ್ದು ಜೋಶಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ.
ಧಾರವಾಡ ಲೋಕಸಭಾ ಟಿಕೆಟ್ಗೆ ಬೇಡಿಕೆ?
ಸೇರ್ಪಡೆ ವೇಳೆ ಜಗದೀಶ ಶೆಟ್ಟರ್ ತಮಗೆ ಎಲ್ಲಿ ಅನ್ಯಾಯ ಮಾಡಲಾಗಿದೆಯೋ ಅಲ್ಲೇ ಗೌರವ ನೀಡಬೇಕು ಎಂದು ಷರತ್ತು ಹಾಕಿದ್ದು ಧಾರವಾಡ ಲೋಕಸಭಾ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ. ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸ್ಥಾನದಲ್ಲಿ ಟಿಕೆಟ್ ನೀಡುವ ಪ್ರಸ್ತಾಪ ಇಟ್ಟಿದ್ದಾರೆನ್ನುವ ಮಾತು ಹರಿದಾಡುತ್ತಿದೆ. ಬಿಜೆಪಿ ಹೈಕಮಾಂಡ್ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಟಿಕೆಟ್ ನೀಡುವ ಆಫರ್ ನೀಡಿದೆಯೆನ್ನಲಾಗಿದೆ.