ಮಹಾಲಿಂಗಪುರ: ಆಧುನಿಕ ಸೂಫಿಸಂತ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್(76) ಅವರು ಇಂದು ಮುಂಜಾನೆ ನಿಧನ ಹೊಂದಿದರು. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗ ಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಇಂದು ಬೆಳಗ್ಗೆ 6.30ರ ಸುಮಾರಿಗೆ ಅಸುನೀಗಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ್ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಲಘು ಹೃದಯಾ ಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಇಬ್ರಾಹಿಂ ಸುತಾರ್ ಅವರನ್ನು ಕುಟುಂಬಸ್ಥ ರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆ ಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ.
ಮೇ 10, 1940ರಂದು ಜನಿಸಿದ ಇಬ್ರಾಹಿಂ ಎನ್. ಸುತಾರ್ ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್, ತಾಯಿ ಅಮೀನಾಬಿ. ಮೂರನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದ ಸುತಾರ್ ಅವರು ನಂತರ ನೇಕಾರ ವೃತ್ತಿ ಮಾಡುತ್ತಿ ದ್ದರು. ಮಸೀದಿಯಲ್ಲಿ ನಮಾಜು, ಕುರಾನ್ ಅಧ್ಯಯನ ಮಾಡಿದ ಅವರು, ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು.
ಭಾವೈಕ್ಯತೆ ಹರಡುವ ಪ್ರವಚನ ಮಾಡುತ್ತಿದ್ದ ಇಬ್ರಾಹಿಂ ಸುತಾರ್ ಅವರ ಭಾಷಣಗಳನ್ನು ಕೇಳಲು ಭಾರೀ ಸಂಖ್ಯೆಯ ಜನ ಸೇರುತ್ತಿದ್ದರು. ಧರ್ಮಸ್ಥಳ ದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಇಬ್ರಾಹಿಂ ಸುತಾರ್ ಅವರು ಮಾಡಿದ ಭಾಷಣದ ತುಣುಕು ಬಹಳ ವೈರಲ್ ಆಗಿತ್ತು.
1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಇಬ್ರಾಹಿಂ ಸುತಾರ್ ಅವರಿಗೆ, 2018ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಸಿಎಂ ಸಂತಾಪ: ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾಮರಸ್ಯದ ಕೊಂಡಿ ಸುತಾರ ಅವರ ನಿಧನಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮುಂತಾದವರು ಕಂಬನಿ ಮಿಡಿದಿದ್ದಾರೆ.
ನವದೆಹಲಿ : 05, ವೈದಿಕ ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ-ಮುಸ್ಲೀಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಕೃಷ್ಣೆಯ ನಾಡಿನ ಕಬೀರ, ಮಹಲಿಂಗಪುರದ ಇಬ್ರಾಹಿಂ ಸುತಾರ ನಿಧನ ಇಡೀ ನಾಡಿಗೆ ಆದ ನಷ್ಟ ಎಂದು ಕೇಂದ್ರ ಸಚಿವ ಜೋಶಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಬ್ರಾಹಿಂ ಸುತಾರ ಅವರು ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದರು. ಅವರು ಕೇಂದ್ರ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸಮಾಜದಲ್ಲಿ ಸಾಮರಸ್ಯ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ, ಹಾಗೂ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಸಚಿವ ಜೋಶಿ ಪ್ರಾರ್ಥಿಸಿದ್ದಾರೆ.