ಹುಬ್ಬಳ್ಳಿ-ಧಾರವಾಡ ಸುದ್ದಿ

’ದೊಡ್ಡಾಟ’ದಲ್ಲೂ ಸೈ ಎನ್ನಿಸಿಕೊಂಡ ’ಖಡಕ್ ಖಾಕಿ’!

ವೃಷಸೇನನಾಗಿ ಮಿಂಚಿದ ಕಾಲಿಮಿರ್ಚಿ – ವಿಡಿಯೋ ವೈರಲ್

ಹುಬ್ಬಳ್ಳಿ : ಈಗಾಗಲೇ ತಾವು ಕಾರ್ಯ ನಿರ್ವಹಿಸಿದ ಕಡೆಯಲ್ಲೆಲ್ಲಾ ’ಖಡಕ್ ಖಾಕಿ’ ಎಂದು ನಿರೂಪಿಸಿರುವ ಸ್ಥಳೀಯ ಗೋಕುಲ ರಸ್ತೆ ಠಾಣೆ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿಯವರು ಮಾದರಿ ಕಾರ್ಯಗಳ ಮೂಲಕ ಪರಿಚಿತರಾಗಿದ್ದು ಈಗ ದೊಡ್ಡಾಟದ ಪಾತ್ರದ ಮೂಲಕ ಕಲಾವಿದರಾಗಿಯೂ ಹೊಸ ಮಿಂಚು ಹರಿಸಿದ್ದಾರೆ.


ಈಗಾಗಲೇ ಬೀಟ್‌ಗೊಂದು ಮರ, ಅಲ್ಲದೇ ಸ್ವಾತಂತ್ರ್ಯದ ಅಮೃತದಿನದಂದು ಎಲ್ಲ ಬೀಟ್‌ಗಳಲ್ಲೂ ಧ್ವಜಾರೋಹಣ ಅಲ್ಲದೇ ಇತ್ತೀಚೆಗೆ ಗಣೇಶೋತ್ಸವದ ಸಂದರ್ಭದಲ್ಲಿ ತಾವೇ ಹಣೆಗೆ ತಿಲಕವಿಟ್ಟು ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆಗೆ ಅಕ್ಷರಶಃ ಭಾವಾರ್ಥ ಬರೆದಿದ್ದಾರೆ.

ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತ ಅವರು ದಿ. 11ರಂದು ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಜನಪದ ಕಲಾ ಬಳಗ ಟ್ರಸ್ಟ್ ಆಶ್ರಯದಲ್ಲ ನಡೆದ ನಡೆದ ರಮೇಶ ಕರಬಸಮ್ಮನವರ ನಿರ್ದೇಶನದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ವೃಷಸೇನ ಪಾತ್ರದ ಮೂಲಕ ಅತ್ಯುತ್ತಮವಾಗಿ ಅಭಿನಯಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಕಾಲಿಮಿರ್ಚಿ ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ಹೇಳಿರುವ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲೂ ವೈರಲ್ ಆಗಿದೆ. ಅಧಿಕಾರ ಸ್ವೀಕರಿಸಿದ ದಿನದಿಂದ ಠಾಣೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಿರುವ ಅವರು ಅನೇಕ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸಿದ್ದು, ಈಗ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ಸಕಾರಾತ್ಮಕ ಧೋರಣೆ, ಜಾತಿ, ಮತ,ಪಂಥಗಳನ್ನು ಮೀರಿ ಭಾವೈಕ್ಯತೆಯನ್ನು ಕೃತಿಯಲ್ಲಿ ಆಚರಣೆಗೆ ತರುತ್ತಿರುವವರು ವಿರಳವಾಗುತ್ತಿರುವ ಸಂದರ್ಭದಲ್ಲಿ ಕಾಲಿಮಿರ್ಚಿಯವರಂತಹ ಮುಚ್ಚು ಮರೆಯಿಲ್ಲದ ನೇರ ಮಾತಿನ ಅಧಿಕಾರಿಗಳು ಬೆರಳೆಣಿಕೆಯಲ್ಲಿ ಮಾತ್ರ ಸಿಗುತ್ತಾರೆ.

administrator

Related Articles

Leave a Reply

Your email address will not be published. Required fields are marked *