ಹುಬ್ಬಳ್ಳಿ-ಧಾರವಾಡ ಸುದ್ದಿ
ಬಂಡಾಯ ಚಳವಳಿಯ ಗಟ್ಟಿ ಧ್ವನಿ ಇನ್ನಿಲ್ಲ; ಚಂಪಾ ನೆನಪು ಮಾತ್ರ

ಬಂಡಾಯ ಚಳವಳಿಯ ಗಟ್ಟಿ ಧ್ವನಿ ಇನ್ನಿಲ್ಲ; ಚಂಪಾ ನೆನಪು ಮಾತ್ರ

ಬೆಂಗಳೂರು : ಬಂಡಾಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ (83) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
“ಚಂಪಾ” ಎಂದೇ ಜನಪ್ರಿಯರಾಗಿದ್ದ ಅವರು, ಪತ್ನಿ ನೀಲಾ, ಪುತ್ರ ಸುನೀಲ, ಪುತ್ರಿ ಮೀನಾ, ಹಾಗೂ ಮೊಮ್ಮಗ ಚೈತ್ರ, ಅಪಾರ ಶಿಷ್ಯರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
1939 ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಲ್ಲಿ ಬಸವರಾಜ ಮತ್ತು ಮುರಿಗೆವ್ವ ದಂಪತಿಯ ಉದರದಲ್ಲಿ ಜನಿಸಿದ ಚಂದ್ರಶೇಖರ, ಹತ್ತಿಮತ್ತೂರಲ್ಲಿಯೇ ಪ್ರಾಥಮಿಕ ಮತ್ತು ಹಾವೇರಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಉನ್ನತ ವ್ಯಾಸಂಗಕ್ಕೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಅಂದಿನ ಕಾಲೇಜು ದಿನಗಳಲ್ಲಿಯೇ ಕಾವ್ಯ ರಚನೆಗೆ ಮುಂದಾದರು. ವಿ.ಕೃ.ಗೋಕಾಕರ ಕಾವ್ಯ ದೀಕ್ಷೆ ಪಡೆದ ಚಂಪಾ ಮುಂದೆ. ಕವಿ, ನಾಟಕಕಾರ ಮತ್ತು ಕನ್ನಡದ ಸಾರ್ವಜನಿಕ ಬೌದ್ಧಿಕ ಬರವಣಿಗೆ. ಅವರು ಬಂಡಾಯ ಚಳುವಳಿಯ ಪ್ರಮುಖ ಧ್ವನಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೂ ಮಾತೃ ಭಾಷೆ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಚಂಪಾ ಅವರು ೧೯೬೪ ರಲ್ಲಿ ತಮ್ಮ ಇಬ್ಬರು ಗೆಳೆಯರಾದ ಲೇಖಕ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ್ ಅವರೊಂದಿಗೆ ಸೇರಿ ’ಸಂಕ್ರಮಣ’ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದರು.
ಗೋಕಾಕ ವರದಿ ಜಾರಿ ಆಂದೋಲನ, ಬಂಡಾಯ ಚಳವಳಿ, ತುರ್ತುಪರಿಸ್ಥಿತಿಲಿನ್ನಿತರ ಆಂದೋಲನಗಳಲ್ಲಿ, ಸಾಮಾಜಿಕ ಮತ್ತು ಸಾಹಿತ್ಯಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. ಮಂಡಲ ವರದಿಯ ಅನುಷ್ಠಾನ, ರೈತ ಚಳುವಳಿಗಳಲ್ಲಿಯೂ ಸಕ್ರೀಯರಾಗಿ ತೊಡಗಿಸಿಕೊಂಡಿದ್ದ ಚಂಪಾ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಕೂಡ ಅನುಭವಿಸಿದ್ದರು.
ಕಾವ್ಯ ಕ್ಷೇತ್ರದಲ್ಲಿಗಿಂತ ಹೆಚ್ಚಾಗಿ ಗದ್ಯ, ವಿಶೇಷವಾಗಿ ನಾಟಕ ಸಾಹಿತ್ಯದಲ್ಲಿ ಅವರ ಕೃಷಿ ಸ್ಫುಟಗೊಂಡಿದ್ದು ಎದ್ದು ಕಾಣುತ್ತದೆ. ೧೧ ನಾಟಕಗಳನ್ನು ರಚಿಸಿ ರಂಗಭೂಮಿಗೆ ಹೊಸ ಆಯಾಮ ತಂದು ಕೊಟ್ಟವರು ಪಾಟೀಲರು.
ಎಡಪಂಥೀಯ ವಿಚಾರ ಧಾರೆಗಳಿಗೆ ಬದ್ಧರಾಗಿ ಬದುಕಿದ ಚಂಪಾ, ಆಡಳಿತರೂಢ ಸರಕಾರಗಳನ್ನು ತಮ್ಮ ಎಂದಿನ ಟೀಕೆ, ವಿಡಂಬನೆ, ವ್ಯಂಗ್ಯಗಳ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಚಂಪಾ ಅವರು ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿ, ಅಂಕಣಕಾರರಾಗಿ, ಲೇಖಕರಾಗಿ ಬಂಡಾಯ, ನವೋದಯ ಸಾಹಿತ್ಯ ಚಳವಳಿಯಲ್ಲಿ ಸಕ್ರೀಯರಾಗಿದ್ದರು. ಬಂಡಾಯ ಮತ್ತು ನವೋದಯ ಸಾಹಿತ್ಯದಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಲು ಕಾರಣರಾದವರು.
ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಭಾಷೆ,ನೆಲ, ಜಲಗಳ ಸಮಸ್ಯೆಗಳು ಬಂದಾಗ ಅತ್ಯಂತ ಹರಿತ ಮತ್ತು ತೀಕ್ಷ್ಣಪ್ರತಿಕ್ರಿಯೆ ನೀಡುತ್ತಿದ್ದರು. ಮೈಸೂರಿನಲ್ಲಿ ಜರುಗಿದ ೮೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿಯೂ ಹಲವರ ವಿರೋಧವನ್ನು ಸಹ ಎದುರಿಸಿದ್ದ ಚಂಪಾ, ಅದಾವುದಕ್ಕೂ ಜಗ್ಗದೇ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು.

ಪೇಡೆ ನಗರಿಯ ಪಂಚಪಾಂಡವರು
ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಡಾ.ಎಂ.ಎಂ.ಕಲಬುರ್ಗಿ.ಡಾ.ಚಂದ್ರಶೇಖರ ಕಂಬಾರ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಸಾಹಿತ್ಯ ವಲಯದಲ್ಲಿನ ಪಂಚಪಾಂಡವರು ಎಂದೇ ಗುರುತಿಸಿಕೊಂಡವರು.
ಕಾಲೇಜಿನಲ್ಲಿ ಸಹಪಾಠಿಗಳೇ ಆಗಿದ್ದರೂ ಮುಂದೆ ತಮ್ಮ ಸೈದ್ಧಾಂತಿಕ ನಿಲುವುಗಳ ಬೆನ್ನು ಹತ್ತಿದರು. ಪ್ರೊ.ಚಂದ್ರಶೇಖರ ಪಾಟೀಲ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಡಾ. ಗಿರಡ್ಡಿ ಗೋವಿಂದರಾಜ ಇಂಗ್ಲೀಷ್ ಮೂವರು ಆಗಾಗ್ಗೆ ಸೇರಿದರೆ ಅಲ್ಲಿ ಸಾಹಿತ್ಯ ಮಾತ್ರವಲ್ಲದೇ ಹಲವಾರು ವಿಷಯಗಳ ಕುರಿತು ಹರಟುತ್ತಿದ್ದರು. ವೈಯಕ್ತಿಕವಾಗಿ ಅತ್ಯಂತ ಸಲುಗೆಯಿಂದ ಮಾತನಾಡುತ್ತಿದ್ದ ಪರಿಣಾಮ ಅದು ಗಂಭೀರ ವಿಷಯವಾಗಿದ್ದರೂ ಹಾಸ್ಯದಿಂದ ಕೂಡಿರುತ್ತಿತ್ತು. ಕೆಲವೊಮ್ಮೆ ಹಾಸ್ಯದ ವಿಷಯ ಕೂಡ ಗಂಭೀರ್ಯತೆ ಪಡೆದುಕೊಳ್ಳುತ್ತಿತ್ತು.

ನನಸಾಗದ ಆಸೆ
ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ವಿದಾನಸಭೆ ಅಥವಾ ವಿಧಾನಪರಿಷತ್ ಪ್ರವೇಶಿಸಬೇಕು ಎಂಬ ಹಂಬಲವಿತ್ತು. ಅದಕ್ಕಾಗಿ ಅವರು ಅನೇಕ ಬಾರಿ ತೆರೆಮರೆಯಲ್ಲಿ ಪ್ರಯತ್ನ ನಡೆಸಿದರೂ ಆ ಭಾಗ್ಯ ದಕ್ಕಲಿಲ್ಲ. ಹೀಗಾಗಿ ಅವರ ಆಸೆ ನನಸಾಗದೇ ಹೋಯಿತು.

administrator

Related Articles

Leave a Reply

Your email address will not be published. Required fields are marked *