ಹುಬ್ಬಳ್ಳಿ-ಧಾರವಾಡ ಸುದ್ದಿ
ಆರಿದ ಚೆಂಬೆಳಕು; ಧಾರವಾಡದ ’ಆಕಾಶಬುಟ್ಟಿ’ ಕಳಚಿತು

ಆರಿದ ಚೆಂಬೆಳಕು; ಧಾರವಾಡದ ’ಆಕಾಶಬುಟ್ಟಿ’ ಕಳಚಿತು

ಧಾರವಾಡ: ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ, ಸಮನ್ವಯದ ಕವಿ, ಸುನೀತಗಳ ಸಾಮ್ರಾಟ್ ಎಂದೇ ಖ್ಯಾತರಾಗಿದ್ದ ನಾಡೋಜ ಚೆನ್ನವೀರ ಕಣವಿ ಇಂದು ಮುಂಜಾನೆ 9.30 ರ ಸುಮಾರಿಗೆ ತಮ್ಮ 94 ನೇ ವಯಸ್ಸಿನಲ್ಲಿ ಕೊನೆಯುಸಿರೆಳದಿದ್ದಾರೆ.


ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಸಮೀಪದ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಣವಿ ಅವರು ಪುತ್ರರಾದ ಶಿವಾನಂದ, ಚಂದ್ರಮೌಳಿ, ಪ್ರಿಯದರ್ಶಿ, ರಂಜನಾ ಮತ್ತು ಪುತ್ರಿ ಕರುಣಾ ಪ್ರಸಾದ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.


ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28 ರಂದು ಜನಿಸಿದ ಅವರು, ತಮ್ಮ ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿಯೇ ಪೂರೈಸಿದ್ದರು. 1952 ರಲ್ಲಿ ಕವಿವಿಯಿಂ ಸ್ನಾತಕೋತ್ತರ ಪದವಿ ಪಡೆದ ಅವರು, ಅಲ್ಲಿಯೇ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿದ್ದರು.

ಇದೇ ವೇಳೆ ಸಾಹಿತ್ಯ ಕ್ಷೇತ್ರದತ್ತ ಹೊರಳಿದ ಅವರನ್ನು ಬಹಳ ಆಕರ್ಷಿಸಿದ್ದು ಸಾನೆಟ್. ಕವಿತೆ ಜನತೆಗೆ ತಲುಪಬೇಕು ಎಂದು ಬಯಸುತ್ತಿದ್ದರು ಕಣವಿ. ಕಾವ್ಯಾಕ್ಷಿ, ಆಕಾಶಬುಟ್ಟಿ, ಭಾವಜೀವಿ, ಮಧುಚಂದ್ರ ಮಣ್ಣಿನ ಮೆರವಣಿಗೆ,ದಾರಿ ದೀಪ, ನೆಲ ಮುಗಿಲು, ಎರಡು ದಡ ಸೇರಿದಂತೆ 16 ಕವನ ಸಂಕಲನಗಳು, ಸಾಹಿತ್ಯ ಚಿಂತನ ಕಾವ್ಯಾನುಸಂಧಾನ, ಸಮಾಹಿತ, ಮಧುರ ಚೆನ್ನ, ಸಮತೋಲನದಂತಹ ವಿಮರ್ಶಾ ಲೇಖನಗಳು, ಹಕ್ಕಿಲೋಕ, ಚಿನ್ನರ ಲೋಕವ ತೆರಯೋಣದಂತ ಮಕ್ಕಳ ಕವಿತೆಗಳು, ಕನ್ನಡದ ಕಾಲು ಶತಮಾನ, ಸಿದ್ಧಿವಿನಾಯಕ ಮೋಕದ, ಕವಿತೆಗಳು ಸಂಪಾದಿತ ಕೃತಿಗಳು.

ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುದು ಸೂರ್ಯನ ಕಡೆಗೆ, ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ ಇನ್ನಿತರ ಗೀತೆಗಳು ಜನಪ್ರಿಯವಾಗಿವೆ. ಚೆನ್ನವೀರ ಕಣವಿ ಅವರು ‘ಸುನೀತಗಳ ಸಾಮ್ರಾಟ್’ ಎಂದೇ ಪ್ರಸಿದ್ಧರು. ಹೊಸಗನ್ನಡ ಕಾವ್ಯದಲ್ಲಿ ಅವರಷ್ಟು ಸುನೀತಗಳ ಬರೆದ ಕವಿ ಇನ್ನೊಬ್ಬರಿಲ್ಲ.


ಕಣವಿ ಮೊದಲು ಕವಿತಾ ಸಂಕಲನ ‘ಕಾವ್ಯಸಾಕ್ಷಿ’ಯಿಂದ ಇತ್ತೀಚಿನ ‘ಭೂಮಿ ಬದುಕು’ ಸಂಕಲನದವರೆಗೆ ಆರುನೂರು ಕವಿತೆಗಳನ್ನು ರಚಿಸಿದ ಕಣವಿ ಅವರು ಕನ್ನಡ ಜನತೆಯ ಪ್ರೀತಿಯ ಕವಿ. ಅವರ ‘ಹೂವು ಹೊರಳುವವು ಸೂರ್ಯನ ಕಡೆಗೆ. ನಮ್ಮ ದಾರಿ ಬರಿ ಚಂದ್ರನವರೆಗೆ’ ತುಂಬಾ ಪ್ರಸಿದ್ಧವಾದ ಕವಿತೆ.ಕಣವಿ ಸಮಗ್ರಕಾವ್ಯ’ ಐದು ಮುದ್ರಣಗಳನ್ನು ಕಂಡಿದೆ. ಅವರ ನಾಲ್ಕು ಭಾವಗೀತೆಗಳು ಧ್ವನಿಸುರುಳಿಗಳು ಸುಗಮ ಸಂಗೀತದ ಮೂಲಕ ರಸಿಕರನ್ನು ರಂಜಿಸಿವೆ.


ಕಣವಿ ಅವರು ಕನ್ನಡ ಸಾಂಸ್ಕೃತಿಕ ಪ್ರಪಂಚದ ನಾಯಕರಾಗಿದ್ದರು. ಮೃದು ಮಾತಿನ ಸಜ್ಜನಿಕೆಯ ಕಣವಿ ಅವರು ಕರ್ನಾಟಕದ ತುಂಬಾ ಸಂಚರಿಸಿ ಸಾಹಿತ್ಯ ಪ್ರಸಾರ ಕಾರ್ಯ ನಡೆಸಿದರು. ಯುವ ಮನಸ್ಸುಗಳಿಗೆ ಕಾವ್ಯಪ್ರೀತಿಯನ್ನು ಕಲಿಸಿದರು. ಯಾರೊಡನೆಯೂ ಜಗಳವಾಡದ, ಯಾವುದೇ ವಾಗ್ವಾದದಲ್ಲಿ ಸಿಕ್ಕಿಕೊಳ್ಳದ, ತಮ್ಮ ಸಮತೋಲನವನ್ನು ಕಳೆದುಕೊಳ್ಳದ ವ್ಯಕ್ತಿತ್ವ ಅವರದ್ದಾಗಿತ್ತು. ಹಾಗೆಂದು ಅವರು ಅನ್ಯಾಯದ ವಿರುದ್ಧ ಎದ್ದು ನಿಂತವರು. ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಚಳವಳಿ, ಕನ್ನಡಪರ ಹೋರಾಟಗಳಲ್ಲಿ ಪ್ರಮುಖ ಪಾಲುಗಾರಿಕೆ ಹೊಂದಿದ್ದರು.
ಗೋಕಾಕ ಚಳವಳಿ ಸಂದರ್ಭದಲ್ಲಿ ಜೈಲು ವಾಸ ಕೂಡ ಅನುಭವಿಸಿದ್ದರು. ಕನ್ನಡ ಶಕ್ತಿಕೇಂದ್ರದ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಮಾರ್ಗದರ್ಶಕರಾಗಿದ್ದರು. ಕಣವಿ ಅವರ ಬಾಳಸಂಗಾರ್ತಿ, ಕನ್ನಡದ ಖ್ಯಾತ ಕಥೆಗಾರ್ತಿ ಶಾಂತಾದೇವಿ ಕಣವಿ ಅವರು ಎರಡು ವರ್ಷಗಳ ಹಿಂದೆ ಅಗಲಿದ್ದಾರೆ. ಇದೀಗ ಶತಮಾನದ ಶ್ರೇಷ್ಠ ಕವಿಯಾಗಿ ಆಧುನಿಕ ಕಾವ್ಯದಲ್ಲಿ ಕಣವಿ ಚಿರಸ್ಮರಣೀಯರಾಗಿದ್ದಾರೆ.
ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1996 ರಲ್ಲಿ ಹಾಸನದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವ-ಸನ್ಮಾನಗಳು ಕಣವಿ ಅವರಿಗೆ ಸಂದಿವೆ.

 

administrator

Related Articles

Leave a Reply

Your email address will not be published. Required fields are marked *