16ಕೋಟಿಗೂ ಹೆಚ್ಚು ಅವ್ಯವಹಾರ -ಲೋಕಾದಲ್ಲಿ ಪ್ರಕರಣ ದಾಖಲು
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ ಸಿಟಿ ಅನುದಾನದ ಅಡಿಯಲ್ಲಿ ಮಹಾತ್ಮಾ ಗಾಂಧಿ ಉದ್ಯಾನ ಹಾಗೂ ಇಂದಿರಾ ಗಾಜಿನ ಮನೆ ಕಾಮಗಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರವಾಗಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಮಹಾತ್ಮಾ ಗಾಂಧೀಜಿ ಉದ್ಯಾನವನ ವೇದಿಕೆಯ ಬಸವರಾಜ ತೇರದಾಳ, ರೇವಣಸಿದ್ದಪ್ಪ ಹುಬ್ಬಳ್ಳಿ, ಮಾಜಿ ಪಾಲಿಕೆ ಸದಸ್ಯರಾದ ಲಕ್ಷ್ಮಣ ಗಂಡಗಾಳೇಕರ, ಮೋಹನ ಹಿರೇಮನಿ, ಇವರುಗಳು ಸಲ್ಲಿಸಿದ ದೂರಿನನ್ವಯ (ಎಲ್‌ಓಕೆ/ಬಿಜಿಎಂ/7451/2022) ದಾಖಲಾಗಿದ್ದು ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ ಅವರಿಗೆ ಉರುಳಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.
ಉದ್ಯಾನವನದ ಅಭಿವೃದ್ಧಿ ಹೆಸರಿನಲ್ಲಿ ಸ್ಮಾರ್ಟ ಸಿಟಿ ಯೋಜನೆ ಅಡಿ ರೂ. 26.11 ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಸರ್ಕಾರದ ಹಣವನ್ನು ದುರಪಯೋಗ ಹಾಗೂ ಭ್ರಷ್ಟಾಚಾರ ನಡೆದಿರುವ ಸಂಶೆಯದ ಮೇಲೆ ತನಿಖೆಗೆ ಒತ್ತಾಯಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಸರಕಾರವು ನಿಗದಿತ ಸಮಯದಲ್ಲಿ ತನಿಖೆಗೆ ಆದೇಶ ಮಾಡದ ಹಿನ್ನೆಲೆಯಲ್ಲಿ ಲೋಕಾಯುಕ್ತ ಕದ ತಟ್ಟಿದ್ದರು.
ಪುಟಾಣಿ ರೈಲಿಗೆ ಹಳೇ ಟ್ರಾಕ್ ಜೋಡಿಸಿದ್ದು, ಉದ್ಘಾಟನೆ ದಿನವೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಎದುರೇ ಅವಘಡ ಸಂಭವಿಸಿತ್ತಲ್ಲದೇ ಉದ್ಯಾನದ ಗೋಡೆಗಳು ಬಿರುಕು ಬಿಟ್ಟಿವೆ,ಟೈಲ್ಸ್‌ಗೆ ಸಹ ಬಣ್ಣ ಲೇಪನ ಮಾಡಿದ್ದು, ಹೊಸ ಟೈಲ್ಸ ಅಳವಡಿಸಿಲ್ಲ. ಸ್ಕೇಟಿಂಗ ಮೈದಾನದ ಸುತ್ತಲೂ ಹೊಸ ಕಾಮಗಾರಿ ಮಾಡಿಲ್ಲ. ಕಾರಂಜಿ ಹಿಂದೆ ನಿರ್ಮಿಸಿದ್ದಾಗಿದ್ದು ಯಂತ್ರೋಪಕರಣಗಳು ಸಂಪೂರ್ಣ ಕಳಪೆಯದ್ದಾಗಿದ್ದು ಸುಮಾರು 16 ಕೋಟಿಗೂ ಹೆಚ್ಚಿನ ಅವ್ಯವಹಾರವಾಗಿದೆ ಎನ್ನಲಾಗುತ್ತಿದೆ.