ಹುಬ್ಬಳ್ಳಿ-ಧಾರವಾಡ ಸುದ್ದಿ

’ಹೊರಟ್ಟಿ’ ಭದ್ರಕೋಟೆ ವಶಕ್ಕೆ ಬಿಜೆಪಿ ಭರದ ಸಿದ್ಧತೆ; ಪಶ್ಚಿಮ ಶಿಕ್ಷಕರ ಕ್ಷೇತ್ರ: ಮೂವರ ಹೆಸರು ಶಿಫಾರಸು?

ಹುಬ್ಬಳ್ಳಿ: ಒಂದೆಡೆ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ಧಾರವಾಡ ಜಿಲ್ಲೆಯಿಂದ ಹಾಲಿ ಸದಸ್ಯರೇ ಆಗಿರುವ ಪ್ರದೀಪ ಶೆಟ್ಟರ್ ಬಹುತೇಕ ಅಂತಿಮಗೊಂಡಿದ್ದು ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಹ ಈಗಿನಿಂದಲೇ ತಯಾರಿಯನ್ನು ಬಿಜೆಪಿ ನಡೆಸಿದ್ದು ಸೋಲಿಲ್ಲದ ಸರದಾರ, ಹಾಲಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಸೆಡ್ಡು ಹೊಡೆಯಲು ಮೂವರ ಹೆಸರನ್ನು ವರಿಷ್ಠರ ಅಂಗಳಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

     ಮೋಹನ ಲಿಂಬಿಕಾಯಿ,              ಸಂದೀಪ ಬೂದಿಹಾಳ                     ಸುಧೀಂದ್ರ ದೇಶಪಾಂಡೆ

ಕೇಸರಿ ಪಾಳೆಯಕ್ಕೆ ಅವಿಭಾಜ್ಯ ಧಾರವಾಡ ಜಿಲ್ಲೆ ಮತ್ತು ಕಾರವಾರ ಒಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಇನ್ನೂ ಕಬ್ಬಿಣದ ಕಡಲೆಯಾಗಿಯೇ ಇದ್ದು ಇದ್ದು, ಈ ಬಾರಿ ವಶಕ್ಕೆ ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದಿದೆ.
ಪದವೀಧರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಮಾಜಿ ಸಿಎಂ ಯಡಿಯೂರಪ್ಪ ಅತ್ಯಾಪ್ತ ಬಣದಲ್ಲಿರುವ ಮೋಹನ ಲಿಂಬಿಕಾಯಿ, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಶಿಕ್ಷಕಸ್ನೇಹಿಯಾಗಿ ವ್ಯವಸ್ಥಿತವಾಗಿ ಕರೆಸಿಕೊಳ್ಳುತ್ತಿರುವ ಸಂದೀಪ ಬೂದಿಹಾಳ, ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆಯವರ ಹೆಸರುಗಳು ಶಿಫಾರಸು ಆಗಿದೆ ಎನ್ನಲಾಗಿದೆ.
ಮುಂದಿನ ವರ್ಷ ಮದ್ಯಂತರ ವೇಳೆಗೆ ಚುನಾವಣೆ ಖಚಿತವಾಗಿದ್ದು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ನೇತ್ರತ್ವದಲ್ಲಿ ಸಭೆಯು ನಡೆದಿದೆ.
ಕಳೆದ 7 ಅವಧಿಯಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಂದಿರುವ ಹೊರಟ್ಟಿ ಎದುರು ಸೆಣಸಾಟ ಸುಲಭವಲ್ಲದ್ದಾದರೂ ನಾಲ್ಕೂ ಜಿಲ್ಲೆಗಳಲ್ಲಿ ಹೆಚ್ಚಿನ ಶಾಸಕರನ್ನು ಹೊಂದಿರುವ ಬಿಜೆಪಿ ಈ ಬಾರಿ ಈಗಿನಿಂದಲೇ ಅದರ ತಯಾರಿಗೆ ಮುಂದಾಗಿದೆ.
ಈ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಆರ್ ಎಸ್ ಎಸ್ ಪ್ರಮುಖರು ಸೇರಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಹಾಗಾಗಿ ಸಂಘ ನಿಷ್ಠೆ ಪ್ರಮುಖ ಪಾತ್ರ ವಹಿಸಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಚಕ್ರವರ್ತಿ ಸೂಲಿಬೆಲೆ, ಉತ್ತರ ಕನ್ನಡ ಮೂಲದ ಸುನೀಲ ದೇಶಪಾಂಡೆ ಮತ್ತಿತರರ ಹೆಸರುಗಳು ಸಹ ಕೇಳಿ ಬಂದಿದ್ದವಾದರೂ ಅಂತಿಮವಾಗಿ ಪ್ರಮುಖರ ಅಭಿಪ್ರಾಯ ಕ್ರೋಡಿಕರಿಸಿ ಮೂವರ ಹೆಸರು ಶಿಫಾರಸುಗೊಂಡಿದ್ದು ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ನಂತರ ಈ ಕ್ಷೇತ್ರದ ಆಯ್ಕೆ ವೇಗ ಪಡೆದುಕೊಳ್ಳಬಹುದು ಎನ್ನಲಾಗಿದೆ.
ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಪ್ರಭಾವಿ ಶಿಕ್ಷಕ ಮುಖಂಡ ಬಸವರಾಜ ಗುರಿಕಾರ ಕಾಂಗ್ರೆಸ್‌ನಿಂದ ಉಮೇದುವಾರರಾಗುವ ಸಾಧ್ಯತೆಗಳಿದ್ದು ಒಟ್ಟಿನಲ್ಲಿ ಹಿಂದೆಂದಿಗಿಂತ ಹೆಚ್ಚು ರೋಚಕವಾಗುವ ಸಾಧ್ಯತೆಗಳಿವೆ.

 

administrator

Related Articles

Leave a Reply

Your email address will not be published. Required fields are marked *