ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಬಿಜೆಪಿಯ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್‌ನ ಸಲೀಮ್ ಅಹ್ಮದ ಇಬ್ಬರೂ ಸುಲಭವಾಗಿ ವಿಧಾನಸೌಧಕ್ಕೆ ಬಲಗಾಲಿಡುವ ಸಾಧ್ಯತೆ ದಟ್ಟವಾಗಿದ್ದರೂ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ ಪಕ್ಷೇತರನಾಗಿ ಕಣಕ್ಕಿಳಿದಿರುವುದು ರಂಗೇರುವಂತೆ ಮಾಡಿದೆ.
ಕೆಎಲ್‌ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಕಣಕ್ಕಿಳಿಯಲು ಸಿದ್ದತೆ ನಡೆಸಿಕೊಂಡಿದ್ದರಾದರೂ ಅನಾರೋಗ್ಯದ ಹಿನ್ನೆಲೆಯಲ್ಲಿ ನಿರ್ಧಾರದಿಂದ ಹಿಂದೆ ಸರಿದುದು ಬಿಜೆಪಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದರೂ ಮಲ್ಲಿಕಾರ್ಜುನ ಹಾವೇರಿಯ ಸ್ಪರ್ಧೆ ಕೇಸರಿ ಪಾಳೆಯದಲ್ಲಿ ಮತ್ತೆ ಸಣ್ಣ ಚಿಂತೆಗೆ ಕಾರಣವಾಗಿದೆ.
ಬಿಜೆಪಿ ಮೂಲದದವರೇ ಆದ ಮಲ್ಲಿಕಾರ್ಜುನ ಹಾವೇರಿ ಗುತ್ತಿಗೆದಾರರಾಗಿದ್ದ ಅಧಿಕೃತ ಆಸ್ತಿ ೩೦ ಕೋಟಿ ಘೋಷಿಸಿಕೊಂಡಿದ್ದು ಎರಡನೇ ಅವಧಿ ಬಂಡುಕೋರರಾಗಿ ಕಣಕ್ಕಿಳಿದು ಎಪಿಎಂಸಿಯ ಚುಕ್ಕಾಣಿ ಎರಡನೇ ಬಾರಿಗೆ ಹಿಡಿದವರಾಗಿದ್ದು ಅಲ್ಲದೇ ಪಂಚಮಸಾಲಿ ಸಮುದಾಯದವರು ಎಂಬುದು ಇನ್ನೊಂದು ಮಹತ್ವದ ಸಂಗತಿಯಾಗಿದೆ.
ಅಲ್ಲದೇ ಮಲ್ಲಿಕಾರ್ಜುನ ಹಾವೇರಿ ಸ್ಪರ್ಧೆಗೆ ಹಾವೇರಿ ಜಿಲ್ಲೆಯ ಕೆಲ ಪ್ರಭಾವಿ ಬಿಜೆಪಿ ಮುಖಂಡರ ಬೆಂಬಲವೂ ಇದೆ ಎನ್ನುವ ಗುಸು ಗುಸು ಕೇಳಿ ಬರಲಾರಂಭಿಸಿದೆ.
ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಈ ಬಾರಿಯ ಟಿಕೆಟ್ ನೀಡಬೇಕೆಂಬ ಕೂಗಿಗೆ ಮನ್ನಣೆ ದೊರಕಿದ್ದು,ಪಕ್ಷ ನಿಷ್ಟರಲ್ಲದೇ, ಹಿರಿತನ ಹೊಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇತ್ತೀಚಿನ ಹಾನಗಲ್ ಗೆಲುವಿನಲ್ಲೂ ತಮ್ಮ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಿ ಕೈ ಗೆಲುವಿಗೆ ಕೊಡುಗೆ ನೀಡಿದ್ದ ಸಲೀಮ್ ಅಹ್ಮದಗೆ ಟಿಕೆಟ್ ನೀಡಿರುವುದು ಯಾವುದೇ ಬಂಡಾಯಕ್ಕೆ ಆಸ್ಪದವಾಗಿಲ್ಲವಾಗಿದ್ದು, ಕೆಲ ಆಕಾಂಕ್ಷಿಗಳಿಗೆ ಸ್ಪಲ್ಪ ಅಸಮಾಧಾನ ಸಹಜವಾದರೂ ಸೆಡ್ಡು ಹೊಡೆಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದು ನಾಮಪತ್ರ ಪರಿಶೀಲನೆ ನಡೆಯುತ್ತಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವವರ ಸಂಖ್ಯೆ ಸಂಜೆ ವೇಳೆಗೆ ಅಂತಿಮಗೊಳ್ಳಲಿದ್ದು, ತದನಂತರ ಮನವೊಲಿಕೆ ಕಾರ್ಯ ಆರಂಭಗೊಳ್ಳುವ ಸಾಧ್ಯತೆಗಳಿವೆ.
ಹಾವೇರಿ ಎಪಿಎಂಸಿ ಚುನಾವಣೆ ವೇಳೆ ಶಾಸಕ ನೆಹರೂ ಓಲೇಕಾರ ಅವರಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಹಾವೇರಿ ಈಗ ಕಮಲ ಪಾಳೆಯಕ್ಕೆ ಮಗ್ಗುಲ ಮುಳ್ಳಾಗಿದ್ದು ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
karnataka-legislative-council-election-mlc-24-11-2021