ಬೆಂಗಳೂರು: 25 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಆಡಳಿತ ಪಕ್ಷ ಬಿಜೆಪಿ ನಾಳೆ ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿಶ್ಚಿತ ಎನ್ನಲಾಗುತ್ತಿದೆ.
ಹಾಲಿ ನಿವೃತ್ತರಾಗಲಿರುವ 6 ಸದಸ್ಯರ ಪೈಕಿ ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಪ್ರದೀಪ ಶೆಟ್ಟರ್ ಸಹಿತ ಐವರಿಗೆ ಟಿಕೆಟ್ ಪಕ್ಕಾ ಎನ್ನಲಾಗಿದ್ದು ಮಡಿಕೇರಿಯಿಂದ ಮಾಜಿ ಸಚಿವ ಅಪ್ಪಚ್ಚು ರಂಜನ್ ಸಹೋದರ ಸುನಿಲ ಸುಬ್ರಹ್ಮಣ್ಯಗೆ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.
ಪಕ್ಷಕ್ಕಾಗಿ ದುಡಿದ ಮೂಲ ಬಿಜೆಪಿಗೆರಿಗೆ ಆದ್ಯತೆ ನೀಡಲು ವರಿಷ್ಠರು ಚಿಂತನೆ ನಡೆಸಿದ್ದು, ದುರ್ಬಲವಾಗಿರುವ ಕಡೆ ಮಾತ್ರ ವಲಸಿಗರಿಗೆ ಮಣೆ ಹಾಕುವರೆನ್ನಲಾಗಿದ್ದು, ಮೈಸೂರಿನಲ್ಲಿ ಸಂದೇಶ್ ನಾಗರಾಜ್‌ಗೆ ದಕ್ಕುವ ಸಾಧ್ಯತೆಗಳಿವೆ.
ಬೆಳಗಾವಿಯ ಎರಡೂ ಸ್ಥಾನಗಳಿಗೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು ಹಾಲಿ ವಿಧಾನಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿದ್ದ ಮಹಂತೇಶ್ ಕವಟಗಿ ಮಠ ಅವರ ಜೊತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ.ಈಗಾಗಲೇ ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಸಹೋಧರ ಚನ್ನರಾಜ ಹಟ್ಟಿಹೊಳಿ ಅಂತಿಮಗೊಳಿಸಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಭಾರೀ ಜಿದ್ದಾ ಜಿದ್ದಿ ನಿಶ್ಚಿತವಾಗಿದೆ.
ದಕ್ಷಿಣ ಕನ್ನಡದಲ್ಲಿ ಹಾಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿಯಾಗುವುದು ನಿಕ್ಕಿಯಾಗಿದೆ. ಚಿಕ್ಕಮಗಳೂರಿನಿಂದ ಹಾಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕಲಬುರಗಿಯಿಂದ ಜಿ.ಟಿ.ಪಾಟೀಲ, ಶಿವಮೊಗ್ಗದಿಂದ ಸಿದ್ದರಾಮಪ್ಪ ಇಲ್ಲವೇ ಮಾಜಿ ಸಭಾಪತಿ ಶಂಕರಮೂರ್ತಿ ಪುತ್ರ ಅರುಣ್ ಅವರು ಅಂತಿಮಗೊಳ್ಳಬಹುದೆನ್ನಲಾಗಿದೆ.
ಆದರೆ ತುಮಕೂರು, ದಾವಣಗೆರೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಮುಂತಾದವುಗಳಿಗೆ ಅಂತಿಮ ಕ್ಷಣದಲ್ಲಿ ಘೋಷಣೆಯಾಗಬಹುದೆಂದು ಹೇಳಲಾಗಿದೆ.
ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯಿಂದ ಪ್ರದೀಪ ಶೆಟ್ಟರ್ ಹೆಸರು ಮಾತ್ರ ಇದೆ ಎನ್ನಲಾಗಿದೆ.