ಹುಬ್ಬಳ್ಳಿ-ಧಾರವಾಡ ಸುದ್ದಿ

ಸದ್ದಿಲ್ಲದ ಸಾಧಕ ಡಾ. ರಾಮನಗೌಡರಗೆ ಪ್ರಶಸ್ತಿ; ಎಐಜೆವೈಎಫ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಧಾರವಾಡ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪೇಡೆನಗರಿಯ ಹಿರಿಯ ವೈದ್ಯ ಡಾ. ಎಸ್.ಆರ್. ರಾಮನಗೌಡರರನ್ನು ಅನೇಕ ಗಣ್ಯರು ಅವರ ಮನೆಯಲ್ಲಿ ಶಾಲು ಹಾಕಿ, ಸಿಹಿ ತಿನಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಮೃತ ದೇಸಾಯಿ, ಡಾ. ರಾಮನಗೌಡರ ಅವರು ಪರಿಣಿತ ವೈದ್ಯರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜನಸೇವೆಯಲ್ಲಿ ತೊಡಗಿದ್ದಾರೆ. ಹಲವಾರು ಸಂಘ- ಸಂಸ್ಥೆಗಳ ಪದಾಧಿಕಾರಿಯಾಗಿ ಕ್ರಿಯಾಶೀಲರಾಗಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಸಮಾಜಮುಖಿ ಕೆಲಸಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದು ಧಾರವಾಡಕ್ಕೆ ಅಕ್ಷರಶಃ ಹೆಮ್ಮೆಯಾಗಿದೆ ಎಂದರು.


ಮಹಾನಗರ ಪಾಲಿಕೆಯ ಸದಸ್ಯ ಈರೇಶ ಅಂಚಟಗೇರಿ, ಹಿರಿಯರಾದ ಸಿ.ಎಸ್. ಪಾಟೀಲ, ರಾಜಶೇಖರ ಬೆಳ್ಳಕ್ಕಿ, ಬಸವರಾಜ ಕೌಜಲಗಿ, ಸುನೀಲ ಮೋರೆ, ಬಸವರಾಜ ಶಿರೋಳ, ಟಿ.ಕೆ. ಪಾಟೀಲ ಮತ್ತಿತರರಿದ್ದರು.

ಎಐಜೆವೈಎಫ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಹುಬ್ಬಳ್ಳಿ: ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳ ವಿಭಾಗದಲ್ಲಿ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಸಂಸ್ಥೆ ರಾಜ್ಯೋತ್ಸವ ಪ್ರಶಸ್ತಿ ಗರಿಯನ್ನು ಸಿಕ್ಕಿಸಿಕೊಂಡಿದೆ.


ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ’ಸಂಸ್ಥೆಯ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಸಂಸ್ಥೆ ಕಳೆದ ೨೦ ವರ್ಷಗಳಿಂದ ೨೦೦ಕ್ಕೂ ಹೆಚ್ಚು ಕೃತಕ ಕಾಲು ಜೋಡಣಾ ಶಿಬಿರಗಳನ್ನು ರಾಜ್ಯ ಹಾಗೂ ನೆರೆಯ ರಾಜ್ಯಗಳಲ್ಲಿ ಆಯೋಜಿಸಿದ್ದು, ೪೦ ಸಾವಿರ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಈ ಪ್ರಶಸ್ತಿ ನಮ್ಮ ತಂಡದ ನಿಸ್ಪ್ರಹ ಸೇವೆಗೆ ಸಂದ ಗೌರವ’ ಎನ್ನುತ್ತಾರೆ.


’ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸಂಸ್ಥೆಯ ಜವಾಬ್ದಾರಿ ಹೆಚ್ಚಿಸಿದೆ. ಮತ್ತಷ್ಟು ಸಮಾಜ ಸೇವೆ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ. ಸಂಸ್ಥೆಯು ಸೀಳು ತುಟಿ ಸಮಸ್ಯೆ ಎದುರಿಸುತ್ತಿದ್ದ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ನೆರವಾಗಿದೆ. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಡ ವಿದ್ಯಾರ್ಥಿಗಳಿಗೆ ಅಹಿಂಸಾ ನೋಟ್ ಪುಸ್ತಕ ವಿತರಿಸಲಾಗುತ್ತಿದೆ. ಅಲ್ಲದೇ ಮಹಾವೀರ ಪಠ್ಯಪುಸ್ತಕ ಬ್ಯಾಂಕ್‌ನಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಗುತ್ತಿದೆ’ ಎಂದರು.
ಲಿಂಬ್ ಸೆಂಟರ್ ಚೇರಮನ್ ವೀರೇಂದ್ರ ಜೈನ ಮಾತನಾಡಿ, ಕೃತಕ ಕಾಲು ಜೋಡಣೆಗೆ ಉತ್ತರ ಕರ್ನಾಟಕದ ಜನ ಜೈಪುರಕ್ಕೇ ಹೋಗಬೇಕಾಗಿತ್ತು. ಸಂಸ್ಥೆ ಈ ಸಮಸ್ಯೆಯನ್ನು ತಪ್ಪಿಸಿ ಸಾವಿರಾರು ಜನ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲು ನೆರವಾಗಿದೆ. ಜೈನ್ ಯೂತ್ ಫೆಡರೇಷನ್‌ನೊಂದಿಗೆ ಹಲವು ಸಂಸ್ಥೆಗಳು ನಮ್ಮ ಜತೆ ಕೈಜೋಡಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜ ಸೇವೆ ಗುರಿ ಹೊಂದಿದ್ದೇವೆ ಎಂದರು.

ಶಹನಾಯಿ ವೆಂಕಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಹುಬ್ಬಳ್ಳಿ: ತಾಲ್ಲೂಕಿನ ಶರೇವಾಡ ಗ್ರಾಮದ ಜಾನಪದ ಕಲಾವಿದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಅವರು ಪ್ರಸ್ತುತ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.


75 ವರ್ಷದ ವೆಂಕಪ್ಪ ಅವರು, ಕಳೆದ 55 ವರ್ಷಗಳಿಂದ ಶಹನಾಯಿ ಹಾಗೂ ಕರಡಿ ಮೇಳದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ, ಸರ್ಕಾರ ಅವರಿಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ವೆಂಕಪ್ಪ ಅವರು ಶಹನಾಯಿ ಮತ್ತು ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸರ್ಕಾರದ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡು ಕಲೆ ಪ್ರದರ್ಶಿಸಿದ್ದಾರೆ. ಮೈಸೂರು ದಸರಾ ಉತ್ಸವ ಹಾಗೂ ಮಂಗಳೂರು ಕುದ್ರೋಳಿ ದಸರಾ ಉತ್ಸವದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಪೌರಾಣಿಕ ನಾಟಕ, ಸಣ್ಣಾಟ-ದೊಡ್ಡಾಟ, ಕೋಲಾಟ, ಹೆಜ್ಜೆ ಮೇಳ ಮತ್ತು ಭಜನಾ ಮೇಳದಲ್ಲಿ ಶಹನಾಯಿ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಗುರು ಶಿಷ್ಯ ಪರಂಪರೆಯಲ್ಲಿ ಶಹನಾಯಿ ತರಬೇತಿಯನ್ನು ಮೂರು ತಿಂಗಳು ನೀಡಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಅವರಿಗೆ, ಹಲವಾರು ಪ್ರಶಸ್ತಿಗಳು ದೊರಕಿವೆ. ಬೆಂಗಳೂರಿನ ಕರ್ನಾಟಕ ನೃತ್ಯ ಅಕಾಡೆಮಿ ’ನಮ್ಮ ಸಾಧಕರು’ ಪ್ರಶಸ್ತಿ ನೀಡಿ ಗೌರವಿಸಿದೆ.
’ಆಧುನಿಕ ದಿನಗಳಲ್ಲಿ ಜಾನಪದ ಕಲೆಗೆ ಸರಿಯಾಗಿ ಗೌರವ ಸಿಗುತ್ತಿಲ್ಲ ಎನ್ನುವ ಬೇಸವಿತ್ತು. ಇದೀಗ ಸರ್ಕಾರ ಶಹನಾಯಿ ಕಲೆ ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ಜಾನಪದ ಕ್ಷೇತ್ರಕ್ಕೆ ಸಂದ ಗೌರವ. ಜಾನಪದ ಕಲೆಯಲ್ಲಿ ಅಧ್ಯಾತ್ಮವಿದೆ, ಬದುಕಿನ ಮೌಲ್ಯವಿದೆ. ಕಲೆಯ ಉಳಿವಿಗೆ ಇಂದಿನ ಯುವ ಸಮುದಾಯ ಮುಂದಾಗಬೇಕಿದೆ’ ಎಂದು ಪ್ರಶಸ್ತಿಗೆ ಭಾಜನರಾದ ವೆಂಕಪ್ಪ ಭಜಂತ್ರಿ ಹೇಳಿದರು.

 

administrator

Related Articles

Leave a Reply

Your email address will not be published. Required fields are marked *