ಜನಮನ ಸೆಳೆದ ’ಹೆಂಗಸರ ಪಂಚೇತಿ’, ಯಕ್ಷರಾತ್ರಿ
ಭಾರ್ಗವ ಬಳಗದಿಂದ ಸಡಗರ ಸಂಭ್ರಮದ’ಕುಂದಾಪ್ರ’ ಕನ್ನಡ ಹಬ್ಬ
ಧಾರವಾಡ: ಕುಂದಾಪ್ರ ಕನ್ನಡ ಭಾಷೆ ಕೃಷಿ ಮೂಲದಿಂದ ಬಂದಿದ್ದು ಹೀಗಾಗಿ ಇದು ಭಾಷೆ ಅಲ್ಲ, ಬದ್ಕ್ ಎಂದು ಸುರೇಶ್ ಹೆಗಡೆ ಹೇಳಿದರು.
ಅವರು ಇಲ್ಲಿನ ಭಾರ್ಗವ ಬಳಗದ ಆಶ್ರಯದಲ್ಲಿ ಭಾನುವಾರ ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದ ವಿಶ್ವ ಕುಂದಾಪ್ರ ಕನ್ನಡದ ಹಬ್ಬದಲ್ಲಿ ಮಾತನಾಡಿದರು.
ಬಿಡುವಿಲ್ಲದ ಕೆಲಸಗಳ ನಡುವೆಯೂ ಇಂತ ಒಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಭಾರ್ಗವ ಬಳಗದವರನ್ನು ಅಭಿನಂದಿಸಿದರು.
ಹರಿ ಓಂ ಸುಧಾಕರ್ ಶೆಟ್ಟಿ ಮಾತನಾಡಿ, ಕುಂದಾಪುರ ಕನ್ನಡ ವಿಶ್ವ ದಿನಾಚರಣೆಯನ್ನು ಧಾರವಾಡದಲ್ಲಿ ಸತತ ಮೂರನೇ ವರ್ಷ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ತಮ್ಮ ಮಾತೃಭಾಷೆಯ ಮೇಲಿನ ಗೌರವ ಮತ್ತು ಅಲ್ಲಿನ ಸಂಸ್ಕೃತಿಯನ್ನು ಇಲ್ಲಿಯ ಜನರಿಗೆ ಪರಿಚಯಿಸಿರುವುದು ಕೂಡ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಉದ್ಯಮಿ ಭುಜಂಗ ಶೆಟ್ಟಿ ಮಾತನಾಡಿ, ವ್ಯವಹಾರ ನಿಮಿತ್ತ ದೂರದ ಊರಗಳಲ್ಲಿ ಇರುವವರು ಕೂಡ ತಮ್ಮ ಮೂಲ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಅದಕ್ಕಾಗಿ ಒಂದು ದಿನವನ್ನು ಮೀಸಲಿಟ್ಟು ಎಲ್ಲಾ ಕುಂಡಗನ್ನಡದವರು ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದು ಸಂತೋಷದ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ್ ಶೆಟ್ಟಿ ಮಾತನಾಡಿ, ಒಂದು ತಲೆಮಾರಿನ ಯುವ ಸಮೂಹ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಒಂದು ದಿನವನ್ನು ಮೀಸಲಿಟ್ಟು ಕರಾವಳಿ ಭಾಗದ ಕಲಾತಂಡಗಳನ್ನು ಕರೆದು ಅಲ್ಲಿನ ಕಲಾ ಪ್ರಕಾರಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಹೂಣೇ ನಮ್ಮದು. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಮೂಲಕ ಕೈಜೋಡಿಸಬೇಕೆಂದು ಮನವಿ ಮಾಡಿದರು.
ರವೀಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿಗಳಾದ ಸುಭಾಷ್ ಚಂದ್ರ ಶೆಟ್ಟಿ, ಅಶೋಕ್ ಶೆಟ್ಟಿ, ಶಾಂತರಾಮ್ ಶೆಟ್ಟಿ, ದಿನೇಶ್ ಶೆಟ್ಟಿ ಇದ್ದರು. ಭಾರ್ಗವ ಬಳಗದ ಶ್ರೀಧರ್ ಶೆಟ್ಟಿ, ಉದಯ್ ಶೆಟ್ಟಿ, ರಘುರಾಮ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಶರತ್ ಶೆಟ್ಟಿ, ಸುಚೇಂದ್ರ ಶೆಟ್ಟಿ, ಅಶೋಕ್ ಶೆಟ್ಟಿ, ವಸಂತ್ ಶೆಟ್ಟಿ ಸೇರಿದಂತೆ ಇತರರಿದ್ದರು.
ಗಜ್ ಬಾಯ್ ಗೌರಿಯರ್ ಇವರಿಂದ ’ಹೆಂಗಸರ ಪಂಚೇತಿ’ ಎಂಬ ಹಾಸ್ಯ ನಾಟಕ ಜನಮನ ಸೆಳೆಯಿತು.
ರಾಘವೇಂದ್ರ ಮಯ್ಯರ ಗಾನ ಸಾರಥ್ಯದಲ್ಲಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ ಇವರಿಂದ ಯಕ್ಷರಾತ್ರಿ ನೋಡಿದ ಜನತೆ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಆನಂದಿಸಿದರು.
ರಾಘವೇಂದ್ರ ಮಯ್ಯ, ಉಮೇಶ ಮರಾಠೆ ಭಾಗವತರಾಗಿ, ರಮೇಶ ಭಂಡಾರಿ ಮದ್ದಲೆ, ಮೂರುರು ಸುಬ್ರಮಣ್ಯ ಹೆಗಡೆ, ಕಾಡೂರು ರವಿ ಆಚಾರ್ ಚೆಂಡೆ, ಮುಮ್ಮೇಳದಲ್ಲಿ ಇದ್ದರು. ಕೋಡಿ ವಿಶ್ವನಾಥ ಗಾಣಿಗ, ತೊಂಬಟ್ಟು ವಿಶ್ವನಾಥ ಆಚಾರ್, ಚಂದ್ರಹಾಸಗೌಡ ಹೊಸಪಣ್ನ, ನಿತಿನ್ ಶೆಟ್ಟಿ, ಉಳ್ಳೂರು ನಾರಾಯಣ, ರಜತ್ ವಂಡ್ಸೆ, ಸ್ತ್ರೀವೇಷದಲ್ಲಿ ಮಾಧವ ನಾಗೂರು, ಹಕ್ಕಾಡಿ ರವಿಶೆಟ್ಟಿ, ಕಿರಾಡಿ ವಿಶ್ವನಾಥ, ಸಚಿನ್, ಹಾಸ್ಯಪಾತ್ರದಲ್ಲಿ ಕ್ಯಾದಗಿ ಮಹಾಬಲೇಶ್ವರ್ ಭಟ್, ಉಳ್ಳೂರು ಶಂಕರ ನಾಯ್ಕ್ ಅಭಿನಯಿಸಿದರು.