ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕ್ರಿಕೆಟ್ ಅಕಾಡೆಮಿಯಾದ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ವತಿಯಿಂದ ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಅ. 31ರಿಂದ ನವಂಬರ್ 14ರವರೆಗೆ ’ಲೀಲಾವತಿ ಪ್ಯಾಲೇಸ್ ಕಪ್’ ಎರಡನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೀಲಾವತಿ ಪ್ಯಾಲೇಸ್ ಮಾಲೀಕ ರಾಜೇಂದ್ರ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14ವರ್ಷದ ಒಳಗಿನವರ ಅಂತರ ಕ್ಯಾಂಪ್ ಕ್ರಿಕೆಟ್ ಟೂರ್ನಿ ಇದಾಗಿದ್ದು, ಹುಬ್ಬಳ್ಳಿಯಿಂದ 7, ಧಾರವಾಡದಿಂದ 4, ಬೆಳಗಾವಿಯ 4 ಮತ್ತು ಗದುಗಿನ 1ತಂಡ ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ದೀಪಾವಳಿ ಹಬ್ಬದ ಕಾರಣ ನವಂಬರ್ 4 ಮತ್ತು 5ರಂದು ಪಂದ್ಯಗಳು ಇರುವುದಿಲ್ಲ. ಈ ಪಂದ್ಯಗಳನ್ನು ನ. 6 ಹಾಗೂ 7ರಂದು ಹುಬ್ಬಳ್ಳಿಯ ಆರ್‌ಐಎಸ್ ಮೈದಾನದಲ್ಲಿ ಆಯೋಜಿಸ ಲಾಗುವುದು ಎಂದರು.
16ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ತಲಾ 20 ಓವರ್‌ಗಳ ಟೂರ್ನಿ ಇದಾಗಿದ್ದು, ದಿನವೂ ಎರಡು ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಹೆಚ್ಚು ಅಂಕ ಗಳನ್ನು ಗಳಿಸಿದ ಪ್ರತಿ ಗುಂಪಿನ ಒಂದು ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ ಎಂದರು.
ಮೊದಲ ಆವೃತ್ತಿಯಲ್ಲಿ ಬಿಡಿಕೆ ತಂಡ ಚಾಂಪಿಯನ್ಸ್, ಫಸ್ಟ್ ಕ್ರಿಕೆಟ್ ಅಕಾಡೆಮಿ ರನ್ನರ್ ಅಪ್ ಆಗಿತ್ತು ಎಂದು ವಿವರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜಯಾ ಗೋಲ್ಡ್ ಪ್ಯಾಲೇಸ್ ಮಾಲೀಕ ಹಿತಾರ್ಥ ಎಂ ಆದರ್ಶ ಪಾಲ್ಗೊಳ್ಳುವರು ಎಂದರು.
ಗೋಷ್ಠಿಯಲ್ಲಿ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ಅಧ್ಯಕ್ಷ ಡಾ.ಲಿಂಗರಾಜ ಬಿಳೇಕಲ್, ಕಾರ್ಯದರ್ಶಿ ಸಂದೇಶ ಬೈಲಪ್ಪನವರ ಇದ್ದರು.