ಹುಬ್ಬಳ್ಳಿ: ದೀಪಾವಳಿ ಹಬ್ಬದ ಶುಭಕೋರಲು ಆಗಮಿಸಿದ ಧಾರವಾಡ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅವಮಾನಿಸಿರುವುದನ್ನು ವಿರಶೈವ ಲಿಂಗಾಯತ ಮುಖಂಡ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಕಲ್ಲಪ್ಪ ಯಲಿವಾಳ ಸೇರಿದಂತೆ ಅನೇಕ ಮುಖಂಡರು ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರ್ವಜನಿಕ ಹಿತ ರಕ್ಷಣೆಗೆ ತಮ್ಮ ಜೀವ ಮತ್ತು ಜೀವನವನ್ನು ಮುಡುಪಾಗಿಟ್ಟ ಪೊಲೀಸರು ಹಬ್ಬ ಹರಿದಿನ ಎನ್ನದೆ ಕರ್ತವ್ಯ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಗೌರವ ನೀಡುವುದು ಜನಪ್ರತಿನಿಧಿಗಳ ಮೊದಲ ಕರ್ತವ್ಯ. ಆದರೆ, ಪೊಲೀಸ್ ಅಧಿಕಾರಿ ಬಿಜೆಪಿ ಕಾರ್ಯಕರ್ತನಿಗೆ ಥಳಿಸಿದ್ದಾರೆ ಎಂಬ ಸಲ್ಲದ ಕಾರಣವನ್ನಿಟ್ಟುಕೊಂಡು ತಮ್ಮ ನಿವಾಸದಲ್ಲಿ ಸಾರ್ವಜನಿಕರ ಎದುರು ಅವಮಾನಿಸಿ, ಬೆದರಿಕೆಯೊಡ್ಡಿರುವುದು ಸರಿಯಲ್ಲ ಎಂದಿದ್ದಾರೆ.
ಪೊಲೀಸರು ತಪ್ಪು ಮಾಡಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಅದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಂಡು ತಮ್ಮ ಹೆಸರು ಮಾಡಲು ಅಧಿಕಾರಿಗಳನ್ನು ಅವಮಾನಿಸುವುದು ತಪ್ಪು. ಕೇಂದ್ರ ಸಚಿವರು ಈ ಬಗ್ಗೆ ಗಮನ ಹರಿಸಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರು ತಪ್ಪು ಮಾಡಿದ್ದರೆ ಸಮಸ್ಯೆಗಳನ್ನು ಸಾರ್ವಜನಿಕರು ನಿಮ್ಮ ಮುಂದೆ ತೆಗೆದುಕೊಂಡು ಬಂದಿದ್ದರೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ ಬುದ್ಧಿ ಹೇಳಿ. ಆದರೆ ಹೀಗೆ ಬಹಿರಂಗವಾಗಿ ಅವಮಾನ ಮಾಡಿದ್ದು ಸರೀನಾ? ಕೂಡಲೇ ಆ ಪೊಲೀಸ್ ಅಧಿಕಾರಿಯನ್ನು ಕರೆಯಿಸಿ ಆತ್ಮಸ್ಥೈರ್ಯ ತುಂಬಿ ಕ್ಷಮೆ ಕೇಳುವಂತೆ ಮುಖಂಡರಾದ ಕುಮಾರ ಪಾಟೀಲ, ಎಂ.ಎಫ್.ಹಿರೇಮಠ, ಬಂಗಾರೇಶ ಹಿರೇಮಠ ಸೇರಿದಂತೆ ಅನೇಕ ಮುಖಂಡರು ಒತ್ತಾಯಿಸಿದ್ದಾರೆ.