ಬಹುತೇಕ ಕ್ಷೇತ್ರಗಳಿಗೆ ಇಂದೆ ಅಂತಿಮ : ಡಿಕೆಶಿ
ಶಿವಲೀಲಾ ,ಅಸೂಟಿ ಇಬ್ಬರಲ್ಲೊಬ್ಬರಿಗೆ? ಮತ್ತೆ ಕೈ ಕದ ತಟ್ಟಿದ ಡಾ. ನಾಲವಾಡ
ಬೆಂಗಳೂರು: ಲೋಕ ಸಮರಕ್ಕೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಇಂದು ನಡೆಯಲಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಬಾಕಿ ಉಳಿದಿರುವ ರಾಜ್ಯದ ಎಲ್ಲ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಕಲಬುರಗಿ, ಬಳ್ಳಾರಿ, ಕೋಲಾರ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು-ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ದಾವಣಗೆರೆ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಬೇಕಿದೆ.
ಸಿಇಸಿ ಸಭೆಗೂ ಮುನ್ನ ಮೈಸೂರು, ಬೆಳಗಾವಿ, ಚಿಕ್ಕೋಡಿ, ಕಲಬರಗಿ ಮತ್ತಿತರ ಕೆಲವು ಕ್ಷೇತ್ರಗಳ ಬಗ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜ್ಸೇವಾಲ ಅವರೊಂದಿಗೆ ಒಂದು ಸುತ್ತಿನ ಸಭೆ ನಡೆಯಲಿದೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆ ಮೈಸೂರಿನಿಂದ ಬಿಜೆಪಿಯ ಹಾಲಿ ಸಂಸದ ಪ್ರತಾಪಸಿಂಹ ಬದಲಿಗೆ ಯದುವೀರ್ ಒಡೆಯರ್ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ.
ಜತೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಖರ್ಗೆ ವಿವೇಚನೆಗೆ ಬಿಡಲಾಗಿದೆ. ಹೀಗಾಗಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮುನ್ನ ಎಐಸಿಸಿ ಉಸ್ತುವಾರಿ ಸಮ್ಮುಖದಲ್ಲಿ ಸಿಎಂ, ಡಿಸಿಎಂ ಅವರು ಸಮಾಲೋಚನೆ ನಡೆಸಿ ಅಲ್ಲಿ ಒಮ್ಮತದ ಅಭಿಪ್ರಾಯ ಮೂಡಿ ಬಂದರೆ ಅದನ್ನು ಸಿಇಸಿಗೆ ಶಿಫಾರಸು ಮಾಡಲಿದ್ದಾರೆ. ಬಹುತೇಕ ಇಂದಿನ ಸಭೆ ಯಶಸ್ವಿಯಾದರೆ ರಾತ್ರಿ ಅಥವಾ ಬುಧವಾರ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ದಿಲ್ಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇಂದಿನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮವಾಗಲಿದೆ. ಒಂದೆರಡು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಅಖೈರಾಗಲಿದ್ದು, ನಾಳೆ ಪ್ರಕಟವಾಗಬಹುದು ಎಂದರು.
ಬಿಜೆಪಿ ಸಂಸದ ಸದಾನಂದಗೌಡ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಪಕ್ಷದ ಸಿದ್ಧಾಂತ ಒಪ್ಪಿ ಬರುತ್ತಾರೋ ಬರಲಿ. ಯಾರು ಬರುತ್ತಾರೆ ಎಂದು ನಾನು ಹೇಳುವುದಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹಲವರು ಬಂದಿದ್ದರು ಎಂದರು ಹೇಳಿದರು.
ಶಿವಲೀಲಾ ,ಅಸೂಟಿ ಇಬ್ಬರಲ್ಲೊಬ್ಬರಿಗೆ? ಮತ್ತೆ ಕೈ ಕದ ತಟ್ಟಿದ ಡಾ. ನಾಲವಾಡ
ಧಾರವಾಡ ಕ್ಷೇತ್ರಕ್ಕೆ ಬಿಜೆಪಿ ಈಗಾಗಲೇ ನಾಲ್ಕು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪ್ರಹ್ಲಾದ ಜೋಶಿಯವರನ್ನೇ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಹುರಿಯಾಳು ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲವಾಗಿದ್ದು ಶಿವಲೀಲಾ ಕುಲಕರ್ಣಿ ಅಥವಾ ವಿನೋದ ಅಸೂಟಿ ಇಬ್ಬರಲ್ಲೊಬ್ಬರು ಅಂತಿಮಗೊಳ್ಳಬಹುದು ಎನ್ನಲಾಗುತ್ತಿದೆ.
ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಕಳೆದ ಆರು ತಿಂಗಳಿಂದ ಹಾವೇರಿಯಲ್ಲಿ ಸಿದ್ದತೆ ಮಾಡಿಕೊಂಡು ಅಂತಿಮ ಹಂತದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿ ಶಾಕ್ ನೀಡಿದ ಹಿನ್ನೆಲೆಯಲ್ಲಿ ಡಾ.ಮಹೇಶ ನಾಲವಾಡ ತೀವ್ರ ಅಸಮಾಧಾನಗೊಂಡಿದ್ದು ಅವರೂ ಪಕ್ಷದಿಂದ ಹೊರ ಹೋಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷದ ಕದವನ್ನೂ ಅವರು ಮತ್ತೆ ತಟ್ಟಿದ್ದು ಧಾರವಾಡ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದು ಪರಿಶೀಲಿಸುವ ಸಾಧ್ಯತೆಗಳಿದ್ದರೂ ಈ ಹಂತದಲ್ಲ ಕಷ್ಟ ಎನ್ನಲಾಗುತ್ತಿದೆ.
ಒಬಿಸಿಗೆ ನೀಡಿದಲ್ಲಿ ವಿನೋದ ಅಸೂಟಿ , ಬಹುಸಂಖ್ಯಾತ ಲಿಂಗಾಯತರಿಗೆ ನೀಡಿದಲ್ಲಿ ಶಿವಲೀಲಾ ಕುಲಕರ್ಣಿಗೆ ನಿಕ್ಕಿ ಎಂಬ ಮಾತುಗಳು ದಿಲ್ಲಿಯಂಗಳದಿಂದ ಕೇಳಿ ಬರುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಹ ದಿಲ್ಲಿಗೆ ತೆರಳಿದ್ದಾರೆ.