ಹುಬ್ಬಳ್ಳಿ-ಧಾರವಾಡ ಸುದ್ದಿ

ಲೋಕಸಭೆ ಚುನಾವಣೆ: ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

ಬಿಜೆಪಿ-ಜೆಡಿಎಸ್ ಒಂದಾದರೂ ನಮಗೆ ಭಯವಿಲ್ಲ


ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಒಂದಾದರೂ ನಾವು ಭಯಪಡುವದಿಲ್ಲ .ಈ ಬಾರಿ 15ರಿಂದ 20 ಸ್ಥಾನ ಪಡೆದು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಆಗಮಿಸಿದ ಅವರನ್ನುಮುಖಂಡರು, ಕಾರ್ಯಕಾರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.


ಎರಡು ಪಕ್ಷಗಳು ಮಾತುಕತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾದರೂ ಗೆಲ್ಲುತ್ತೇವೆ. ಇಲ್ಲವಾದರೂ ಗೆಲ್ಲುತ್ತೇವೆ ಎಂದು ಹೇಳಿದರು.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದ್ದು, ಪಕ್ಷದ ಸಭೆ ಕರೆಯಲು ಕೆಲವು ಶಾಸಕರು ಪತ್ರ ಬರೆದಿದ್ದಾರೆ ಹೊರತು, ಅಸಮಾಧಾನಗೊಂಡು ಯಾರು ದೂರು ನೀಡಿಲ್ಲ. ಆದ್ದರಿಂದ ಸಭೆ ಕರೆಯಲಾಗುತ್ತಿದೆ ಎಂದು ತಿಳಿಸಿದರು.


ಜೂನ್ ತಿಂಗಳಲ್ಲಿ ಮಳೆಯ ಅಭಾವ ಹೆಚ್ಚಾಗಿತ್ತು. ಈಗ ನಿರಂತರವಾಗಿ ಮಳೆಯಾಗುತ್ತಿದೆ. ವಾಡಿಕೆ ಮಳೆಗಿಂತ ಜಾಸ್ತಿ ಆಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅಲ್ಲಿ ಹೋಗುತ್ತಿದ್ದೇನೆ ಎಂದರು.
ಮಳೆ ಜಾಸ್ತಿಯಾಗಿರುವ ಪ್ರದೇಶಕ್ಕೆ ತಂಡ ರಚಿಸಿಕೊಂಡು ಭೇಟಿ ನೀಡುವ ಕಾರ್ಯ ಮಾಡಲಾಗುತ್ತದೆ. ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಈಗಾಗಲೇ ಸಚಿವರು ಸಮಸ್ಯೆ ಆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ ಎಂದು ತಿಳಿಸಿದರು.


ಗ್ರಾಮ್ ಒನ್ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಗೃಹ ಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ಹಾಕಲಾಗುತ್ತದೆ ಎಂದು ಹೇಳಿದರು.
ಪ್ರಕೃತಿ ವಿಕೋಪ ಸಾಮಾನ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಬಂದರೇ ಪ್ರವಾಹ, ಕಾಂಗ್ರೆಸ್ ಅಧಿಕಾರದಲ್ಲಿದ್ದರೇ ಬರಗಾಲ ಎಲ್ಲವೂ ಮೂಢ ನಂಬಿಕೆ. ಅದನ್ನು ನಾನು ನಂಬುವುದಿಲ್ಲ ಎಂದು ತಿಳಿಸಿದರು.
ಸರ್ಕಾರ ಅಸ್ಥಿರಗೊಳಿಸಲು ಸಿಂಗಾಪೂರ್‌ನಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇದನ್ನು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅವರನ್ನೆ ಕೇಳಿ, ನನಗೇನೂ ಗೊತ್ತಿಲ್ಲ ಎಂದರು.


ಸಿದ್ದರಾಮಯ್ಯ ಅವರೊಂದಿಗೆ ಸಚಿವರಾದ ಎಚ್.ಕೆ.ಪಾಟೀಲ, ಭೈರತಿ ಸುರೇಶ, ಚೆಲುವರಾಯ ಸ್ವಾಮಿ ಆಗಮಿಸಿದರು. ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರೆಡ್ಡಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಅನಿಲಕುಮಾರ ಪಾಟೀಲ, ಶರಣಪ್ಪ ಕೊಟಗಿ, ಮಹೇಂದ್ರ ಸಿಂಘಿ, ಅನ್ವರ ಮುಧೋಳ, ಪಾರಸಮಲ್ ಜೈನ, ಮಹ್ಮದ ಕೋಳುರ, ಮೋಹನ ಹಿರೇಮನಿ, ಆರ್.ಕೆ.ಪಾಟೀಲ, ಜಿ.ದೇವಕಿ ಸಹಿತ ಅನೇಕರು ಸ್ವಾಗತಿಸಿದರು.

administrator

Related Articles

Leave a Reply

Your email address will not be published. Required fields are marked *