ಸೆಂಟ್ರಲ್ ಕಣದಲ್ಲಿ ಅಪ್ರತಿಮ ಸಂಘಟಕ
ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿ ನಿರೀಕ್ಷೆಯಂತೆಯೆ ಅಪ್ರತಿಮ ಸಂಘಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಬಿಜೆಪಿ ಘೋಷಣೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಸೆಡ್ಡು ಹೊಡೆಯಲಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದೊಳಗೆ ಬಲಗಾಲಿಟ್ಟು ತನಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಲೆ ಬಂದಿರುವ ಅಲ್ಲದೇ ಕಳೆದ ಬಾರಿ ಕಲಘಟಗಿ ಟಿಕೆಟ್ ಘೋಷಣೆಯಾಗಿ ಕೈ ತಪ್ಪಿದರೂ ಚಕಾರ ಶಬ್ಬವತ್ತದೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ, ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರ ಪರಮಾಪ್ತ ಟೆಂಗಿನಕಾಯಿ ಅವರಿಗೆ ಟಿಕೆಟ್ ಈ ಬಾರಿ ನಿಕ್ಕಿ ಎಂಬ ಗುಸು ಗುಸು ಈಗ ನಿಜವಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಸುತ್ತುತ್ತ ಸಂಘಟನಾ ಕಾರ್ಯ ಮಾಡುತ್ತಿರುವ ಟೆಂಗಿನಕಾಯಿ ಬದಲಾದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ವಿರುದ್ಧ ಕಣಕ್ಕಿಳಿಯಲಿದ್ದು ಹೈ ವೋಲ್ಟೇಜ್ ಕಣವಾಗಿ ರಾಷ್ಟ್ರದ ಗಮನ ಸೆಳೆದಿದೆ.
’ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಈ ಹಿಂದೆ ನಡೆದ ಎಲ್ಲ ಚುನಾವಣೆಯಲ್ಲಿ ನಾನು ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ. ಗುರು-ಶಿಷ್ಯರ ನಡುವೆ ಸ್ಪರ್ಧೆ ಏರ್ಪಟಿದ್ದು, ರಾಜಕಾರಣದಲ್ಲಿ ಎಲ್ಲವೂ ಸಾಧ್ಯ. ಕಾರ್ಯಕರ್ತರ ಪಡೆಯನ್ನೇ ಹೊಂದಿರುವ ಪಕ್ಷ ನಮ್ಮದಾಗಿರುವುದರಿಂದ, ಅತ್ಯಧಿಕ ಬಹುಮತ ಪಡೆದು ಗೆಲ್ಲುವ ವಿಶ್ವಾಸವಿದೆ’ ಎಂದು ಟೆಂಗಿನಕಾಯಿ ಟಿಕೆಟ್ ಘೋಷಣೆಯಾದ ನಂತರ ಮಾಧ್ಯಮದವರಿಗೆ ಹೇಳಿದರು.
ಪಕ್ಷದ ವರಿಷ್ಠರು, ಕೋರ್ ಕಮಿಟಿ ಪದಾಧಿಕಾರಿಗಳು ಅಭ್ಯರ್ಥಿಯನ್ನಾಗಿ ನನ್ನ ಹೆಸರು ಘೋಷಣೆ ಮಾಡಿ, ದೊಡ್ಡ ಜವಾಬ್ದಾರಿ ನೀಡಿದೆ. ರಾಜಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ಪಾಲಿಕೆ ಸದಸ್ಯರು, ಮಂಡಲದ ಪದಾಧಿಕಾರಿಗಳು ಹೀಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಸವಾಲಾಗಿ ಎದುರಿಸುತ್ತೇವೆ. ಏ. ೨೦ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದೇನೆ’ ಎಂದರು.
ಟೆಂಗಿನಕಾಯಿ ಹೆಸರು ಘೋಷಣೆಯಾಗುತ್ತಿದ್ದಂತೆ ಅವರ ನೂರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಬೀದಿಗಳಲ್ಲಿ ಬಿಜೆಪಿ ಬಾವುಟ ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.