ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ: ಮುಗಿಲು ಮುಟ್ಟಿದ ವಿನಯ ಪರ ಘೋಷಣೆ

ಪಶ್ಚಿಮದಿಂದ ದೀಪಕ ಚಿಂಚೋರೆ (ಡಿಸಿ) ನಾಮಪತ್ರ ಸಲ್ಲಿಕೆ

ಡಿಸಿಗೆ ಐಟಿ, ನೀರಲಕೇರಿ, ಡಾ.ಮಯೂರ, ನಾಗರಾಜ, ಆರ್.ಕೆ.ಪಾಟೀಲ ಸಾಥ್

ತವನಪ್ಪ, ಬಸವರಾಜ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ

ಧಾರವಾಡ: ಧಾರವಾಡ -71 ಮತ್ತು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬಯಸಿ ಪ್ರಮುಖ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿ ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.


ಸವದತ್ತಿ ರಸ್ತೆಯಲ್ಲಿನ ಮುರುಘಾಮಠದದಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶಿವಲೀಲಾ ಕುಲಕರ್ಣಿ ಅವರು ಪಾದಯಾತ್ರೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ವಿನಯ ಅಭಿಮಾನಿಗಳ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮುಖಂಡರಾದ ಚನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ವಿನಯ ಅವರ ಮಕ್ಕಳು ಸೇರಿದಂತೆ ಮತ್ತಿತರರು ಸಾಥ್ ನೀಡಿದರು.


ಧಾರವಾಡ -71 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಶಿವಲೀಲಾ ಕುಲಕರ್ಣಿ, ಪಕ್ಷೇತರ ಅಭ್ಯರ್ಥಿಗಳಾದ ತವನಪ್ಪ ಅಷ್ಟಗಿ, ಬಸವರಾಜ ಕೊರವರ ನಾಮಪತ್ರ ಸಲ್ಲಿಸಿದರು. ನಗರದ ಶಿವಾಜಿ ಸರ್ಕಲ್‌ನಿಂದ ತವನಪ್ಪ ಅಷ್ಟಗಿ ಮತ್ತು ಬಸವರಾಜ ಕೊರವರ ಅವರು ವಿವಿಧ ವಾದ್ಯ ಮೇಳಗಳು ಹಾಗೂ ತಮ್ಮ ಬೆಂಬಲಿಗರ ಸಮೇತ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.


ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಅವರು ಕೆಸಿಡಿ ವೃತ್ತದಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಪಿ.ಎಚ್.ನೀರಲಕೇರಿ, ಡಾ.ಮಯೂರ ಮೋರೆ, ನಾಗರಾಜ ಗೌರಿ, ಬಸವರಾಜ ಕಿತ್ತೂರ, ಆರ್.ಕೆ.ಪಾಟೀಲ, ಯಾಸೀನ್ ಹಾವೇರಿಪೇಟ್ ಸೇರಿದಂತೆ ಅನೇಕರು ಜೊತೆಗಿದ್ದರು.


ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಎಲ್ಲ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರ ಸಹಿತ ಮೆರವಣಿಗೆ ನಡೆಸಿದ್ದರಿಂದ ನಗರದಲ್ಲಿ ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡಚಣಿ ಉಂಟಾಯಿತು. ಬಿರು ಬಿಸಿಲಿನಲ್ಲಿಯೂ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪ್ರಮುಖರು. ಕಾರ್ಯಕರ್ತರು, ಹಿತೈಷಿಗಳು ಹೆಜ್ಜೆ ಹಾಕುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಕೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *