ಹುಬ್ಬಳ್ಳಿ-ಧಾರವಾಡ ಸುದ್ದಿ
ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಆಯುರ್ವೇದ

ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಆಯುರ್ವೇದ

ಹಬ್ಬಗಳು ಮತ್ತು ಭಾರತೀಯ ಪರಂಪರೆಗೆ ಅವಿನಾಭವ ಸಂಬಂಧವಿದೆ. ಭಾರತೀಯ ಹಬ್ಬಗಳು, ಭಾರತೀಯ ಪರಂಪರೆಯ ಜೊತೆಗೆ ಉತ್ತಮ ಆರೋಗ್ಯದ ಗುಟ್ಟನ್ನ ಹೊಂದಿವೆ. ಸಂಪ್ರದಾಯ ಮತ್ತು ಆಚರಣೆಗಳು ಆಯಾ ಪ್ರದೇಶಗಳ ಜನ ಜೀವನ, ಪರಿಸರ, ಹವಾಮಾನಗಳೊಂದಿಗೆ ಬೆಸೆದಿರುತ್ತಿವೆ. ನಮ್ಮ ಪೂರ್ವಜರ ಆಹಾರ ಪದ್ಧತಿಗಳು ಇಂದಿನ ತಲೆಮಾರಿಗೆ ಗೊಡ್ಡು ಸಂಪ್ರದಾಯದಂತೆ ಗೋಚರಿಸಿದರೂ, ಅದರ ಹಿಂದಿನ ಬಹುದೊಡ್ಡ ಆರೋಗ್ಯದ ರಹಸ್ಯವನ್ನು ಅನಾವರಣಗೊಳಿಸುತ್ತಿವೆ. ಇಂತಹ ಆಹಾರ, ವಿಹಾರ ಪದ್ಧತಿಗಳು ಮತ್ತು ಹಬ್ಬ ಹರಿದಿನಗಳ ಮಹತ್ವವನ್ನು ಅರಿಯುವುದು ನಮ್ಮೆಲ್ಲರಿಗೂ ಅತ್ಯವಶ್ಯವಾಗಿದೆ.
ಆಯುರ್ವೇದವು ಪುರಾತನ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನವಾಗಿದ್ದು ಉತ್ತಮ ಜೀವನ ಶೈಲಿಗೆ ಒಂದು ದಾರಿ ದೀಪವಾಗಿದೆ. ಇಂತಹ ಆಯುರ್ವೇದ ವಿಜ್ಞಾನವು ಹಬ್ಬಗಳ ಮತ್ತು ಅವುಗಳ ಆಚರಣೆಗಳ ಹಿಂದೆ ಅಡಗಿರುವ ಮಹತ್ವವನ್ನು ತಿಳಿಸುತ್ತದೆ.

ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಕ್ರಮಿಸುವುದು ಎಂದರ್ಥ, ಸಂಕ್ರಮಣ ಅಂದರೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನು ಪಥವನ್ನು ಬದಲಿಸಿದರೆ ಅದು ಸಂಕ್ರಮಣವಾಗುತ್ತದೆ. ಅಲ್ಲದೇ ಸೂರ್ಯನು ಜಗತ್ತಿನ ಶಕ್ತಿಯ ಮೂಲವಾಗಿದ್ದಾನೆ. ಸೂರ್ಯನ ಚಲನೆ ಭೂಮಿಯಲ್ಲಿರುವ ಬದಲಾವಣೆಗಳು ಒಂದಕ್ಕೊಂದು ಹೊಂದಿಕೊಂಡಿವೆ. ಹಿಂದೂ ಮತ್ತು ಪಾಶ್ಚಿಮಾತ್ಯ ಕ್ಯಾಲೆಂಡರಗಳು ವರ್ಷವನ್ನು 12 ತಿಂಗಳುಗಳಾಗಿ ವಿಭಜಿಸಿದರೆ ಆಯುರ್ವೇದವು ೬ ಋತುಗಳಾಗಿ ವಿಭಜಿಸುತ್ತದೆ. ಒಂದು ಋತು ಎರಡು ತಿಂಗಳು ಹೊಂದಿರುತ್ತದೆ. ಒಂದು ವರ್ಷವನ್ನು ೨ ಅಯನಗಳಾಗಿ ವಿಂಗಡಿಸಿದೆ. ಉತ್ತರಾಯಣದಲ್ಲಿ ಸೂರ್‍ಯನು ಉತ್ತರದ ಕಡೆಗೆ, ದಕ್ಷಿಣಾಯನದಲ್ಲಿ ದಕ್ಷಿಣದ ಮಾರ್ಗವಾಗಿ ಚಲಿಸುವನು ಉತ್ತರಾಯಣವನ್ನು ಆದಾನ ಕಾಲವಾಗಿ, ದಕ್ಷಿಣಾಯನವನ್ನು ವಿಸರ್ಗಕಾಲವಾಗಿ ವರ್ಣಿಸಲಾಗಿದೆ. ಆದಾನವೆಂದರೆ ಮನುಷ್ಯನ ದೇಹದ ಬಲವನ್ನು ಎಳೆದುಕೊಳ್ಳುವುದು ಎಂದರ್ಥ!. ಈ ಕಾಲದಲ್ಲಿ ಸಹಜವಾಗಿಯೇ ಕಾಲದ ಪ್ರಭಾವದಿಂದ ಮನುಷ್ಯನ ದೇಹ ಬಲವು ಕುಂದಿರುತ್ತದೆ. ಶಿಶಿರ ವಸಂತ ಗ್ರೀಷ್ಮ ಋತುಗಳು ಆದಾನ ಕಾಲವಾಗಿದೆ. ವಿಸರ್ಗ ಕಾಲವು ಬಲವನ್ನು ನೀಡುವುದು ಮತ್ತು ದೇಹದ ವೃದ್ಧಿಗೆ ಕಾರಣವಾಗಿದೆ. ವರ್ಷ ಶರತ ಹೇಮಂತ ಋತುಗಳು ವಿಸರ್ಗ ಕಾಲದ ಅಡಿಯಲ್ಲಿ ಬರುವುದು ಆದಾನವನ್ನು ಸೂರ್‍ಯನು ಉತ್ತರ ಪಥದಲ್ಲಿದ್ದು ಭೂಮಿಯಲ್ಲಿ ತೇವಾಂಶವು ಅಥವಾ ಆರ್ದತೆಯು ಕಡಿಮೆ ಇದ್ದು ಒಣ ಹವಾಮಾನವು ಕಂಡುಬರುತ್ತದೆ ವಿಸರ್ಗದಲ್ಲಿ ಸೂರ್‍ಯನು ದಕ್ಷಿಣ ದ್ರುವದ ಕಡೆಗೆ ಪೂರ್ವದಿಂದ ಪಶ್ಚಿಮದೆಡೆಗೆ ಚಲಿಸಿ ಭೂಮಿಯ ತೇವಾಂಶ ಮತ್ತು ಮನುಷ್ಯರ ದೇಹದಲ್ಲಿನ ಬಲವರ್ಧನೆಗೆ ಸಹಾಯ ಮಾಡುತ್ತಾನೆ. ಶಿಶಿರ ಕಾಲದಲ್ಲಿ ಮಾಘ-ಪಾಲ್ಗುಣವು ಬಂದು ಜನವರಿಯ ಮಧ್ಯಭಾಗದಿಂದ ಫೆಬ್ರವರಿ ಮಧ್ಯಭಾಗದ ವರೆಗೆ ಇರುವುದು. ಈ ಕಾಲದಲ್ಲಿ ಬರುವ ಹಬ್ಬಗಳಾದ ಸಂಕ್ರಾಂತಿ, ಮಹಾಶಿವರಾತ್ರಿ ಮತ್ತು ರಂಗಪಂಚಮಿಗಳ ತಮ್ಮದೆ ಆದ ವೈಶಿಷ್ಟ್ಯತೆ ಹೊಂದಿವೆ. ಸಾಮಾನ್ಯವಾಗಿ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸಂಕ್ರಮಣದಂದು ಎಳ್ಳು, ಬೆಲ್ಲ, ಕಬ್ಬು, ಶೇಂಗಾ, ಸಾಸಿವೆ ಎಣ್ಣೆ, ತುಪ್ಪ, ಮುಂತಾದ ಆಹಾರ ಪದಾರ್ಥಗಳನ್ನು ವಿವಿಧ ರೀತಿಯ ಕಜ್ಜಾಯ ತಿನಿಸುಗಳಾಗಿ ಬಳಸಲ್ಪಟ್ಟರೆ ,ಬಾಹ್ಯವಾಗಿ ಅಭ್ಯಂಜಂನಕ್ಕೆ ಎಳ್ಳೆಣ್ಣೆ ಮಿಶ್ರಿತ ಅರಿಶಿಣವನ್ನು ಬಳಸಿ ಸ್ನಾನ ಮಾಡುವ ಪರಿಪಾಠವಿದೆ.


ಶಿಶಿರ ಋತುವಿನಲ್ಲಿ ಆಯುರ್ವೇದದಲ್ಲಿ ಹೇಳಿದಂತೆ ಮಧುರ, ಆಮ್ಲ ಮತ್ತು ಲವಣ ಯುಕ್ತ ಆಹಾರ ಪದಾರ್ಥ ಸೇವಿಸಿದರೆ ಸೂಕ್ತವಾಗಿರುತ್ತದೆ ಸಂಕ್ರಾಂತಿ ದಿನದಂದು ಸೇವಿಸುವ ಆಹಾರಗಳಾದ ಬೆಲ್ಲ, ಮಧುರ (ಸಿಹಿ) ರಸವನ್ನು ಹೊಂದಿದ್ದು ಎಳ್ಳು ಆಯುರ್ವೇದದಲ್ಲಿ ತಿಲವೆಂದು ಕರೆಯಲ್ಪಟ್ಟು ಅದರ ವಿಪಾಕವು ಅಂದರೆ ಸೇವಿಸಿದ ನಂತರ ದೇಹಗತವಾದಾಗ ಮಧುರವಾಗಿ ಮಾರ್ಪಾಟವಾಗುತ್ತದೆ. ಈ ರಸವು ದೇಹದ ವೃದ್ಧಿಗೆ, ಪುಷ್ಣಿಗೆ ಸಹಾಯವಾಗಿದೆ. ಕಬ್ಬು ಇದರ ರಸವೂ ಸಹ ಸಿಹಿಯಾಗಿದ್ದು ದೇಹಕ್ಕೆ ಬಲಕರವು ತರ್ಪಕವು ಆಗಿದೆ. ಚಳಿಗಾಲದ ಸಮಯದಲ್ಲಿ ದೇಹದ ಚರ್ಮವು ಎಣ್ಣಿ ಆಂಶವನ್ನು ಕಳೆದುಕೊಂಡು ಕಾಂತಿ ಹೀನವಾಗಿರುತ್ತದೆ. ಎಣ್ಣೆ ಸ್ನಾನವು ಈ ಸಂದರ್ಭದಲ್ಲಿ ಚರ್ಮಕ್ಕೆ ಹಿತಕರವು ಕಾಂತಿದಾಯಕವು ಆಗಿದೆ. ಚರ್ಮದಲ್ಲಿ ವಾತದ ಸ್ಥಾನ ವಿರುವುದರಿಂದ ಆಯುರ್ವೇದದಲ್ಲಿ ತಿಳಿಸಿರುವಂತೆ ಎಳ್ಳು ವಾತ ಶಾಮಕವಾಗಿದೆ. ಆದ್ದರಿಂದ ಎಳ್ಳೆಣ್ಣೆ ಸ್ನಾನವು ತಪ್ಪದೆ ಈ ಕಾಲದಲ್ಲಿ ಅನುಸರಿಸತಕ್ಕದ್ದು ಈ ಶಿಶಿರ ಕಾಲದಲ್ಲಿ ಕಫ ದೋಷವು ದೇಹದಲ್ಲಿ ವೃದ್ಧಿಸುವುದು. ದೇಹದ ಅಗ್ನಿ ಎಂದರೆ ಜೀರ್ಣ ಕ್ರಿಯೆ ಪಚನ ಕ್ರಿಯೆಗಳು ಕ್ಷಿಣಿಸುವುದು, ಆದ್ದರಿಂದ ದೀಪನಪಾಚಕ ಆಹಾರಗಳಾದ ಅಳಲೇಕಾಯಿ, ಹಿಪ್ಪಲಿ, ಅಶ್ವಗಂಧ, ಮೂಸಲಿ, ಮೆಂತೆ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಎಳೆ ಬಿಸಿಲಿನ ಸೇವ, ಬೆಚ್ಚಗಿನ ಉಣ್ಣೆ ಬಟ್ಟೆಗಳು, ದಟ್ಟ ಬಣ್ಣದ ಬಟ್ಟೆಗಳು ಧಾರಣೆ, ಆಯುರ್ವೇದ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಯಾವುದೇ ಹಬ್ಬಗಳಾಗಲಿ ಅವುಗಳ ಆಚರಣೆಗಳ ಪೂರ್ವ ಕಾಲದಿಂದಲೂ ಆಚರಿಸುತ್ತಿರುವುದು ವೈಜ್ಞಾನಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಸರಿಯೆನಿಸಿದೆ.
ಆದ್ದರಿಂದ ಪ್ರತಿಯೊಬ್ಬರು ಹಬ್ಬ ಹರಿದಿನಗಳನ್ನು ವಿಜೃಂಭಣೆಗೋ, ತೋರಿಕೆಗೋ ಆಚರಿಸುವುದಕ್ಕಿಂತ ಅದರ ಹಿಂದಿನ ಆರೋಗ್ಯದ ಲಾಭಗಳನ್ನು ಅರಿತು ಆಚರಿಸುವುದು ಒಳ್ಳೆಯದು.

 

 

ಡಾ.ಭಾವನಾ ಭಟ್ಟ
ಆಯುರ್ವೇದ ತಜ್ಞವೈದ್ಯರು
ಹುಬ್ಬಳ್ಳಿ

administrator

Related Articles

Leave a Reply

Your email address will not be published. Required fields are marked *