ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗುಂಡೂರ, ಬೀರಪ್ಪ ಖಂಡೇಕರ, ನಿತೀನ ಇಂಡಿ ಅವಿರೋಧ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆಯಲ್ಲಿ ಇಂದು ಚುನಾವಣೆ ಪ್ರಕ್ರಿಯೆ ನಡೆದು ಅವಿರೋಧವಾಗಿ ಆಯ್ಕೆಯಾದರು.
ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಆಫೀಲುಗಳ ಸಮಿತಿಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗುಂಡೂರ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ನಿತೀನ ಇಂಡಿ ಹಾಗೂ ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬೀರಪ್ಪ ಖಂಡೇಕರ ಆಯ್ಕೆಯಾದರು.


ಪ್ರತಿ ಸಮಿತಿಯಲ್ಲೂ ನಾಲ್ವರು ಬಿಜೆಪಿ ಸದಸ್ಯರು, ಮೂವರು ಕಾಂಗ್ರೆಸ್ ಸದಸ್ಯರು ಇದ್ದು ಹಾಗಾಗಿ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಉಪಮೇಯರ್ ಸತೀಶ ಹಾನಗಲ್, ಸಭಾ ನಾಯಕ ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ, ಶಿವು ಮೆಣಸಿನಕಾಯಿ ಇದ್ದರು.


ಕಳೆದ ದಿ.೧೭ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಲೆಕ್ಕಗಳ ಸ್ಥಾಯಿ ಸಮಿತಿಗೆ ಬಿಜೆಪಿಯ ರತ್ನಾಬಾಯಿ ನಾಝರೆಯವರ ನಾಮಪತ್ರ ತಿರಸ್ಕೃತವಾದ ಕಾರಣ ಆ ಸಮಿತಿಗೆ ಮತ್ತೊಮ್ಮೆ ಚುನಾವಣೆ ನಡೆದು ಆಯ್ಕೆಯಾಗಬೇಕಿದೆ. ಸ್ಥಾಯಿ ಸಮಿತಿಗೆ ಯಾರು ಅಧ್ಯಕ್ಷರಾಗಬೇಕೆಂಬುದನ್ನು ನಿರ್ಧರಿಸಿಯೇ ಸದಸ್ಯರ ಆಯ್ಕೆ ನಡೆದಿತ್ತು.


ಹಣಕಾಸು ಸ್ಥಾಯಿ ಸಮಿತಿ ಹಾಗೂ ನಗರ ಯೋಜನೆ ಎರಡೂ ಸಮಿತಿಗಳೂ ಸೆಂಟ್ರಲ್ ಪಾಲಾದರೆ, ಸಾರ್ವಜನಿಕ ಆರೋಗ್ಯ ಸಮಿತಿ ಧಾರವಾಡ ಗ್ರಾಮೀಣಕ್ಕೆ ದೊರೆತಿದೆ.
35ನೇ ವಾರ್ಡ ಮತ್ತು 43ರಿಂದ ಆಯ್ಕೆಯಾಗಿರುವ ಸದಸ್ಯರಾದ ಗುಂಡೂರ, ಖಂಡೇಕರ ಅವರ ಹಿರಿತನಕ್ಕೆ ಮಣೆ ಹಾಕಲಾಗಿದ್ದು, ಐದನೆ ವಾರ್ಡಿನಿಂದ ಮೊದಲ ಬಾರಿಗೆ ಆಯ್ಕೆಯಾದ ನಿತಿನ್‌ಗೆ ಎರಡನೇ ವರ್ಷದಲ್ಲೇ ಜವಾಬ್ದಾರಿಯ ಸ್ಥಾನ ದಕ್ಕಿದೆ.

 

administrator

Related Articles

Leave a Reply

Your email address will not be published. Required fields are marked *