ಧಾರವಾಡ : ತಾಲೂಕಿನ ಮರೇವಾಡ ಬಳಿ ಧಾರವಾಡ-ಸವದತ್ತಿ ಜಿಲ್ಲಾ ಮುಖ್ಯ ರಸ್ತೆ (ರಾಜ್ಯ ಹೆದ್ದಾರಿ)ಯಲ್ಲಿರುವ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಇದು ಕೇವಲ ಹಣ ವಸೂಲಿ ಮಾಡುವ ಟೋಲ್ ಆಗಿದೆ ಎಂದು ಅಮ್ಮಿನಬಾವಿ ಗ್ರಾಮದ ಮುಖಂಡ, ಮಾಜಿ ತಾ.ಪಂ. ಸದಸ್ಯ ಸುರೇಂದ್ರ ದೇಸಾಯಿ ಆರೋಪಿಸಿದ್ದಾರೆ.
ವಾಹನಗಳು ಅಪಘಾತರಹಿತ ಸುರಕ್ಷಿತವಾಗಿ ಚಲಿಸಲು ಒಳ ಬರುವ ಹಾಗೂ ಹೊರ ಹೋಗುವ ಸಿಗ್ನಲ್ ದೀಪಗಳಿಲ್ಲ. ಟೋಲ್ ಎರಡೂ ಬದಿಗಳ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದು ಹಲವಾರು ತಗ್ಗು-ದಿನ್ನೆಗಳಿಂದ ಕೂಡಿದ್ದು, ವಾಹನಗಳು ಚಲಿಸಿದ ತಕ್ಷಣ ಧೂಳು ಏಳುತ್ತದೆ. ತಗ್ಗಾದ ರಸ್ತೆಗೆ ಸರಿಯಾಗಿ ಖಡಿ ಹಾಕಿ ಡಾಂಬರೀಕರಣ ಮಾಡದೇ ಇರುವುದರಿಂದ ವಾಹನ ಚಾಲಕರು ನಿತ್ಯ ಈ ಟೋಲ್ ನಿರ್ವಾಹಕರಿಗೆ ಹಿಡಿ ಶಾಪ ಹಾಕುವಂತಾಗಿದೆ.
ಟೋಲ್‌ದಲ್ಲಿ ಆಪತ್ಕಾಲಕ್ಕೆ ತುರ್ತು ಸೇವೆಗಾಗಿ ಅಂಬ್ಯುಲನ್ಸ್ ಸಹ ಸೌಲಭ್ಯವಿಲ್ಲ. ಜೊತೆಗೆ ಟೋಲ್ ಸಮೀಪ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಇಲ್ಲದಿರುವುದರಿಂದ ಲೋಕೋಪಯೋಗಿ ಇಲಾಖೆಯು ಮೂಲ ಸೌಕರ್ಯಗಳಿಲ್ಲ. ಆದರೆ, ಈ ಟೋಲ್‌ಗೆ ಇಲಾಖೆ ಪರವಾನಗಿ ಕೊಟ್ಟಿದ್ದೂ ಸಹ ಅಕ್ರಮವಾಗಿದೆ. ಯಾವುದೇ ಮೂಲ ಸೌಕರ್ಯ ಅಭಿವೃದ್ಧಿ ಇಲ್ಲದ ಈ ಟೋಲ್ ಕೇವಲ ಹಣ ವಸೂಲಿಯ ಮೂಲಕ ಪ್ರಯಾಣಿಕರ ಸುಲಿಗೆ ಮಾಡುತ್ತಿದೆ. ಕೂಡಲೇ ಸಂಬಂಧ ಪಟ್ಟ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ,ಎಲ್ಲ ನ್ಯೂನತೆಗಳನ್ನು ಸರಿಪಡಿಸದಿದ್ದರೆ ಟೋಲ್ ಸಂಗ್ರಹ ಕಾರ್ಯವನ್ನು ನಿಲುಗಡೆ ಮಾಡಿಸಲು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ದೇಸಾಯಿ ಎಚ್ಚರಿಸಿದ್ದಾರೆ.