ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21 ನೇ ಅವಧಿಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಮೇ.28 ರಂದು ಚುನಾವಣೆ ನಡೆಯಲಿದೆ. ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಚುನಾವಣಾಧಿಕಾರಿಗಳಾಗಿರಲಿದ್ದಾರೆ.
ಮಹಾಪೌರ ಸ್ಥಾನವು ಸಾಮಾನ್ಯ ವರ್ಗ, ಉಪಮಹಾಪೌರ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇ.28 ರಂದು ಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಸಭೆ ಪ್ರಾರಂಭವಾಗುವುದು. ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರರ ಘೋಷಣೆ, ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದ್ದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ ಮಹಾಪೌರ ಹಾಗೂ ಉಪಮಹಾಪೌರರನ್ನು ಚುನಾಯಿಸಲಾಗುವುದು ಎಂದು ಪಾಲಿಕೆಯ ಆಯುಕ್ತರಾದ ಡಾ.ಬಿ.ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.