ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್ ಭಾಗ್ಯ: ಅಧಿಕಾರದ ಅನುಭವಕ್ಕೊ, ಹಿರಿತನಕ್ಕೊ!

ಮೇಯರ್ ಭಾಗ್ಯ: ಅಧಿಕಾರದ ಅನುಭವಕ್ಕೊ, ಹಿರಿತನಕ್ಕೊ!

ಬಿಜೆಪಿಯಲ್ಲಿ ಸದ್ದಿಲ್ಲದೇ ಬಿರುಸಿನ ಚಟುವಟಿಕೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಚುನಾವಣೆಗೆ ದಿ.28ರ ಮುಹೂರ್ತ ಫಿಕ್ಸ್ ಆಗಿದ್ದು ಅಧಿಕಾರಕ್ಕೇರಲು ಸರಳ ಬಹುಮತದ ಲೆಕ್ಕಾಚಾರದಲ್ಲಿ ಮುಂದಿರುವ ಬಿಜೆಪಿಯಲ್ಲಿ ಸದ್ದಿಲ್ಲದೇ ಚಟುವಟಿಕೆ ಬಿರುಸು ಪಡೆದಿದ್ದು, ಹಿರಿತನದ ಆಧಾರದ ಮೇಲೆ ಈ ಹಿಂದೆ ಮೇಯರ್ ಆಗಿ ಅನುಭವವಿದ್ದವರಿಗೆ ಮಣೆ ಹಾಕುವರೋ ಅಥವಾ ಹೊಸಬರ ಪಾಲಿಗೆ ಧಕ್ಕಲಿದೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಮೇಯರ್ ಪಟ್ಟ ಸಾಮಾನ್ಯರಿಗೆ ಮೀಸಲಾಗಿರುವದರಿಂದ ಪೈಪೋಟಿ ಸಹಜವಾಗಿಯೇ ಇದ್ದು ಧಾರವಾಡಕ್ಕೆ ನೀಡಬೇಕೋ ಅಥವಾ ಹುಬ್ಬಳ್ಳಿಗೋ ಎಂಬುದು ಒಂದು ಲೆಕ್ಕಾಚಾರವಾದರೆ ಮೇಯರ್ ಪಟ್ಟ ಅಲಂಕರಿಸಿ ಅನುಭವವಿದ್ದವರಿಗೆ ನೀಡಬೇಕೆಂಬ ವಿಚಾರವೂ ಮುನ್ನಲೆಗೆ ಬಂದಿದ್ದು, ಹಿರಿತನಕ್ಕೆ ಮಣೆ ಹಾಕಬೇಕೋ ಅಥವಾ ಕನಿಷ್ಠ ಎರಡು ಬಾರಿಯಾದವರಿಗೆ ಪಟ್ಟ ಕಟ್ಟ ಎಂಬುದು ಈಗ ಪಕ್ಷದ ವರಿಷ್ಠರ ಮುಂದಿರುವ ಪ್ರಶ್ನೆಯಾಗಿದೆ.


ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಬೇಕೆಂಬ ಕೂಗು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದುದಲ್ಲದೇ ಕಳೆದ ಎರಡು ಅವಧಿಯಲ್ಲಿ ಪೇಡೆನಗರಿಯ ಇಬ್ಬರಿಗೆ ಮಾತ್ರ ಮೇಯರ್ ಪಟ್ಟ ದೊರಕಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ದೊರಕಬೇಕೆಂಬ ವಾದಕ್ಕೆ ಬಿಜೆಪಿಯ ಪಾಳೆಯದಲ್ಲಿ ಬೆಂಬಲ ಇದೆಯಾದರೂ ಅಂತಿಮ ಕ್ಷಣದಲ್ಲಿ ಯಾವ ಲೆಕ್ಕಾಚಾರಕ್ಕೆ ಮಣೆ ಹಾಕುವರೆಂಬುದನ್ನು ಕಾದು ನೋಡಬೇಕಿದೆ.
ಆಯ್ಕೆಯಾದ 82 ಸದಸ್ಯರ ಪೈಕಿ ಬಿಜೆಪಿಯಲ್ಲಿ ನಾಲ್ಕನೇ ಬಾರಿ ಕಾಲಿಟ್ಟ ಇಬ್ಬರು ಸದಸ್ಯರಿದ್ದಾರೆ. ಇದರಲ್ಲಿ ಮೇಯರ್ ಆಗಿ ಆನುಭವವಿರುವ ವೀರಣ್ಣ ಸವಡಿ ಹಾಗೂ ರಾಮಣ್ಣ ಬಡಿಗೇರ (ಎರಡು ಸಲ ಸಂಯುಕ್ತ ಜನತಾದಳ) ಸೇರಿದ್ದಾರೆ.
ಹ್ಯಾಟ್ರಿಕ್ ಸಾಧಿಸಿದವರ ಪಟ್ಟಿಯಲ್ಲಿ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಚಂದ್ರಶೇಖರ ಮನಗುಂಡಿ ಹಾಗೂ ರಾಧಾಬಾಯಿ ಸಫಾರೆ ಸೇರಿದ್ದಾರೆ. ರಾಜಣ್ಣ ಕೊರವಿ ಮತ್ತು ಮನಗುಂಡಿ ಇಬ್ಬರೂ ಕ್ರಮವಾಗಿ ಎರಡು ಸಲ ಕ್ರಮವಾಗಿ ಜೆಡಿಎಸ್ ಹಾಗೂ ಜೆಡಿಯುದಿಂದ ಗೆದ್ದಿದ್ದನ್ನು ಸ್ಮರಿಸಬಹುದಾಗಿದೆ.
2001ರಲ್ಲೇ ಪಾಲಿಕೆಗೆ ಕಾಲಿಟ್ಟ ಮೇಯರ್ ಸ್ಥಾನದ ಆಕಾಂಕ್ಷಿ ಈರೇಶ ಅಂಚಟಗೇರಿ ಎರಡು ಬಾರಿ ವಾರ್ಡ ಮಹಿಳಾ ಮೀಸಲಾತಿಯಾದ ಕಾರಣ ಈ ಬಾರಿ ಮತ್ತೆ ಚುನಾಯಿತರಾಗಿದ್ದಾರೆ. ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಉಮೇಶ ಕೌಜಗೇರಿ ಶಂಕರ ಶೇಳಕೆ ಮತ್ತಿತರು ಎರಡು ಬಾರಿ ಗೆದ್ದ ಇತರರಾಗಿದ್ದಾರೆ.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಈರೇಶ ಅಂಚಟಗೇರಿ, ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಪರಿಗಣನೆಗೆ ಬರಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳ ದರ್ಬಾರ್ ಆದ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮೇಯರ್ ಸ್ಥಾನ ಅಲಂಕರಿಸಿದವರಿಗೆ ನೀಡಿದರೆ ಒಳಿತು ಎಂಬ ವಾದವೂ ಮುನ್ನೆಲೆಗೆ ಬಂದಿದೆ. ಇದಲ್ಲದೇ ಮೊನ್ನೆ ಸಂಯುಕ್ತ ದಳದಿಂದ ಬಿಜೆಪಿಗೆ ವಲಸೆ ಬಂದು ಅನೇಕ ವರ್ಷಗಳಾದರೂ ಉನ್ನತ ಸ್ಥಾನ ದೊರೆತಿಲ್ಲ. ಹಾಗಾಗಿ ಅವಕಾಶ ನೀಡಬೇಕೆಂಬ ಬಗ್ಗೆ ಮೊನ್ನೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೂ ಕೆಲವರು ಒತ್ತಡ ಹಾಕಿದ್ದಾರೆನ್ನಲಾಗಿದೆ.
ಮೇಯರ್ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ನಿರ್ಧಾರವೇ ಅಂತಿಮವಾದರೂ ಶಾಸಕ ಅರವಿಂದ ಬೆಲ್ಲದ ತಮ್ಮ ಕ್ಷೇತ್ರಕ್ಕೆ ನೀಡಿ ಎಂಬ ಪ್ರಸ್ತಾಪ ಇಡುವ ಸಾಧ್ಯತೆ ಇಲ್ಲದಿಲ್ಲ.
ದಿ.25ರ ನಂತರ ಮೇಯರ್ ಚುನಾವಣೆ ಕಾವು ವೇಗ ಪಡೆದುಕೊಳ್ಳಲಿದ್ದು, ಅಂತಿಮವಾಗಿ ಯಾವ ಫಾರ್ಮುಲಾಕ್ಕೆ ಮೊರೆ ಹೋಗಲಿದ್ದಾರೆಂಬುದು ಗುಟ್ಟಾಗಿಯೇ ಉಳಿದಿದೆ. ಅಲ್ಲದೇ ವಲಸೆ ಮತ್ತು ಮೂಲ ಎಂಬ ವಿಚಾರವೂ ಕೊನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ ಅಚ್ಚರಿಯಿಲ್ಲ.

ಮೇಯರ್ ಅನುಭವ ಹೊಂದಿದವರು:

ವೀರಣ್ಣ ಸವಡಿ, ಶಿವು ಹಿರೇಮಠ, ರಾಧಾಬಾಯಿ ಸಫಾರೆ

ನಾಲ್ಕು ಬಾರಿ ಆಯ್ಕೆಯಾದವರು:

ವೀರಣ್ಣ ಸವಡಿ, ರಾಮಣ್ಣ ಬಡಿಗೇರ

ಮೂರು ಬಾರಿ ಆಯ್ಕೆಯಾದವರು :

ಶಿವು ಹಿರೇಮಠ, ರಾಜಣ್ಣ ಕೊರವಿ, ವಿಜಯಾನಂದ ಶೆಟ್ಟಿ, ಚಂದ್ರಶೇಖರ ಮನಗುಂಡಿ,ಮಲ್ಲಿಕಾರ್ಜುನ ಗುಂಡೂರ,ರಾಧಾಬಾಯಿ ಸಫಾರೆ,

2 ಸಲ ಆಯ್ಕೆಯಾದವರು :

ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ,ಶಂಕರ ಶೇಳಕೆ

ಮೇಯರ್, ಉಪಮೇಯರ್ ಚುನಾವಣೆಗೆ ತಡೆ ಕೋರಿ 23ರಂದು ಸುಪ್ರೀಂ ಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸುವದಾಗಿ ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ನವಾಜ ಕಿತ್ತೂರ, ದಶರಥ ವಾಲಿ, ಕಿರಣ ಸಾಂಬ್ರಾಣಿ ಮತ್ತಿತರು ಹೇಳಿರುವರಾದರೂ ತಡೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಕಳೆದ ದಿ.10ರಂದು ಸುಪ್ರೀ ಕೋರ್ಟ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಕೂಡಲೇ ನಡೆಸುವಂತೆ ಸೂಚನೆ ನೀಡಿ ಚಾಟಿ ಬೀಸಿರುವುದನ್ನು ಸ್ಮರಿಸಬಹುದಾಗಿದೆ.

 

administrator

Related Articles

Leave a Reply

Your email address will not be published. Required fields are marked *