26ರ ಸಂಜೆ,27 ಕ್ಕೆ ಮಹತ್ವದ ಸಭೆ ಸಾಧ್ಯತೆ
ಹುಬ್ಬಳ್ಳಿ: ದಿ.28ರಂದು ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮತ್ತೊಮ್ಮೆ ಅವಧಿಗೆ ಅಧಿಕಾರ ಕೈವಶ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ ಸಕಲ ಸಿದ್ದತೆಯಲ್ಲಿದ್ದು ಯಾರಿಗೆ ಪಟ್ಟ ಕಟ್ಟ ಬೇಕೆಂಬುದು ದಿ.26ರ ನಂತರವೇ ಸ್ಪಷ್ಟವಾಗಲಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದಿಲ್ಲಿಗೆ ತೆರಳಿದ್ದು ದಿ. 26ರಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರ ನಾಮಪತ್ರ ಸಲ್ಲಿಸಲು ಆಗಮಿಸಲಿದ್ದು ಅಂದು ಸಂಜೆ ಮತ್ತು ದಿ. 27ರಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕರ ಅರವಿಂದ ಬೆಲ್ಲದ ಮತ್ತಿತರರು ಸೇರಿದಂತೆ ಪ್ರಮುಖರು ಬಿಜೆಪಿ ಸದಸ್ಯರ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವರೆನ್ನಲಾಗಿದೆ.
ಬಿಜೆಪಿಯಲ್ಲಿ ಚಟುವಟಿಕೆ ಬಿರುಸಾಗಿ ನಡೆದಿದ್ದು, ಹಿರಿತನದ ಆಧಾರದ ಮೇಲೆ ಈ ಹಿಂದೆ ಮೇಯರ್ ಆಗಿ ಅನುಭವವಿದ್ದವರಿಗೆ ಮಣೆ ಹಾಕುವರೋ ಅಥವಾ ಹೊಸಬರ ಪಾಲಿಗೆ ದೊರೆಯಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಮೇಯರ್ ಗೌನ್ ಭಾಗ್ಯ ಸಾಮಾನ್ಯರಿಗೆ ಮೀಸಲಾಗಿರುವದರಿಂದ ಧಾರವಾಡಕ್ಕೆ ನೀಡಬೇಕೋ ಅಥವಾ ಹುಬ್ಬಳ್ಳಿಗೋ ಎಂಬುದು ಒಂದು ಲೆಕ್ಕಾಚಾರವಾದರೆ ಯಾರಿಗೆ ಪಟ್ಟ ಕಟ್ಟಬೇಕೆಂಬುದು ಅಲ್ಲದೇ ಮುಂದಿನ ವರ್ಷ ವಿಧಾನಸಭೆಯ ಚುನಾವಣೆ ಸಹ ಇರುವುದರಿಂದ ಜಾತಿ ಲೆಕ್ಕಾಚಾರವೂ ಇದೆ.
ಧಾರವಾಡದ ವಿಚಾರಕ್ಕೆ ಬಂದರೆ ಈರೇಶ ಅಂಚಟಗೇರಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ ಇದ್ದರೆ, ಹುಬ್ಬಳ್ಳಿಯ ವಿಚಾರಕ್ಕೆ ಬಂದರೆ ಮಾಜಿ ಮೇಯರ್ ವೀರಣ್ಣ ಸವಡಿ, ರಾಮಣ್ಣ ಬಡಿಗೇರ, ರಾಜಣ್ಣಕೊರವಿ, ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ, ಚಂದ್ರಶೇಖರ ಮನಗುಂಡಿ, ಶಿವು ಮೆಣಸಿನಕಾಯಿ ಹಾಗೂ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಹೆಸರು ಪ್ರಸ್ತಾಪವಾಗುವುದು ನಿಶ್ಚಿತ ಎಂದು ಪಕ್ಷದ ಮೂಲಗಳೇ ಹೇಳುತ್ತಿವೆ.
ಮೇಯರ್ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಾದರೂ ಶಾಸಕ ಬೆಲ್ಲದ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.
ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಮೇಯರ್ ಎಲ್ಲಿಗೆ ಹೋಗುತ್ತದೆ ಎಂಬುದರ ಮೇಲೆ ನಿರ್ಧಾರವಾಗಲಿದೆ ಎನ್ನಲಾಗಿದೆ.ಅಂತಿಮವಾಗಿ ಈ ಹಿಂದಿನಂತೆ ದಿ.28ರ ಬೆಳಿಗ್ಗೆಯೇ ಮೇಯರ್ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಹೆಚ್ಚು.
ಅಲ್ಲದೇ ಅಧಿಕಾರಿಗಳ ದರ್ಬಾರಿಗೆ ಮೂಗುದಾರ ಹಾಕಲು ನಿಬಾಯಿಸಬಲ್ಲ ಸಮರ್ಥರನ್ನು ಮಾಡಲಾಗುವುದು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ವೇಳಾ ಪಟ್ಟಿ ಬದಲು : ನಿಗದಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ನಾಮಪತ್ರ ಸ್ವೀಕರಿಸುವ ಅವಧಿಯನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ಬದಲಾಗಿ ಬೆಳಿಗ್ಗೆ 9.30ರಿಂದ 11.30ರವರೆಗೆ ನಿಗದಿಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಇದ್ದ ಚುನಾವವಣೆ ಸಭೆಯು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಈ ವೇಳೆ ನಾಮಪತ್ರ ಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆ ಹಿಂದಕ್ಕೆ ಪಡೆಯುವುದು. ಉಮೇದುವಾರರ ಪಟ್ಟಿ ಘೋಷಣೆ ನಡೆಯಲಿದೆ. ಬಳಿಕ ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಜರುಗಲಿದೆ. ನಡಾವಳಿ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸಿಕೊಂಡು ಮತಗಳ ಎಣಿಕೆ ನಡೆಯಲಿದೆ. ಬಳಿಕ ಫಲಿತಾಂಶ ಘೋಷಣೆ ಮಾಡಲಾಗುವುದು.
ಕರ್ನಾಟಕ ವಿಧಾನಪರಿಷತ್ತಿನ ವಾಯುವ್ಯ ಪದವೀಧರರ, ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಮತಕ್ಷೇತ್ರಗಳ ಚುನಾವಣೆಯ ವಿವಿಧ ಕಾರ್ಯಕಲಾಪಗಳ ನಿಮಿತ್ತ ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೆಯ ವೇಳಾಫಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿ ರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯರ ಸಭೆ
ಮೇಯರ್ ಪಟ್ಟ ಗಳಿಸಲು ಹರ ಸಾಹಸ ಪಡಬೇಕಾಗಿರುವ ಕಾಂಗ್ರೆಸ್‌ಗೆ ಕಷ್ಟ ಸಾಧ್ಯ ಎಂಬ ಅರಿವಿದ್ದರೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದ್ದು ಇಂದು ನೂತನ ಪಾಲಿಕೆ ಸದಸ್ಯರ ಸಭೆಯನ್ನು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸುವರೆನ್ನಲಾಗಿದೆ. ಅಲ್ಲಿನ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಮಾಡಲಿದ್ದು, ಇಷ್ಟರಲ್ಲೇ ವೀಕ್ಷಕರು ನೇಮಿಸಬಹುದು ಎನ್ನಲಾಗಿದೆ.