ವಿಪಕ್ಷಗಳ ಪಟ್ಟು, ಕೋಲಾಹಲ -ಮುಂದೂಡಿಕೆ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಸಿಕ ಸಾಮಾನ್ಯ ಸಭೆಯ ಕಲಾಪ ಗೌನ್ ಧರಿಸುವ ವಿಷಯದಲ್ಲಿ ಆಡಳಿತ ಹಾಗೂ ವಿಪಕ್ಷ ನಡುವೆ ಗದ್ದಲ ನಡೆದು ಯಾವುದೇ ಚರ್ಚೆ ನಡೆಯದೇ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಟ್ಟಿತು.
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ವಿಪಕ್ಷ ಕಾಂಗ್ರೆಸ್ ,ಎಐಎಂಐಎಂ ಸದಸ್ಯರು ಮೇಯರ್ ಈರೇಶ ಅಂಚಟಗೇರಿ ಗೌನ್ ಧರಿಸದೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದು ಗೌನ್ ಧರಿಸಿ ಬರಲು ಆಗ್ರಹಿಸಿದರು.
ಆಗ ಅಂಚಟಗೇರಿ, ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿ ನಂತರ ಗೌನ್ ಬಗ್ಗೆ ಚರ್ಚೆ ಮಾಡೋಣ ಎಂದರಲ್ಲದೇ ಪರಿಸ್ಥಿತಿ ತಿಳಿಗೊಳಿಸಲು ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗೌನ್ ಧರಿಸಿ ಬರಲು ಪಟ್ಟು ಹಿಡಿದರಲ್ಲದೇ, ರಾಷ್ಟ್ರಪತಿ ಮುರ್ಮು ಅವರು ಪೌರಸನ್ಮಾನದಲ್ಲೂ ಬಂದಾಗ ಗೌನ್ ಧರಿಸದೆ ಅವಮಾನ ಮಾಡಿದ್ದೀರಿ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ ಮೇಯರ್ ಆಸನದ ಮುಂದೆ ವಿಪಕ್ಷ ನಾಯಕ ದೊರೈರಾಜ ಮಣಿಕುಂಟ್ಲ, ಇಮ್ರಾನ ಯಲಿಗಾರ, ಡಾ.ಮಯೂರ ಮೋರೆ ಮತ್ತಿತರರು ಮೇಯರ ಆಸನದ ಮುಂದೆ ಹೋಗಿ .ಧರಣಿ ನಡೆಸಲಾರಂಭಿಸಿದರು.
ಗೌನ್ ಧರಿಸದಿದ್ದರೆ ರಾಜಿನಾಮೆ ಕೊಡಿ ಎಂದು ಕಾಂಗ್ರೆಸ್‌ನ ಮಂಜುನಾಥ ಬಡಕುರಿ ಘೋಷಣೆ ಕೂಗಿದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದಾಗ ಸಭೆಯನ್ನು ಮೇಯರ್ ಅರ್ಧ ಗಂಟೆ ಮುಂದೂಡಿದರು. ಮೇಯರ ಅನುಪಸ್ಥಿತಿಯಲ್ಲೂ ಮೇಯರ ಆಸನದ ಮುಂದೆ ಕುಳಿತು ಕಾಂಗ್ರೆಸ್ ಗೌನ್ ಧರಿಸಬೇಕು ಇಲ್ಲದಿದ್ದರೆ ರಾಜಿನಾಮೆ ಕೊಡುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಇದಕ್ಕೆ ಎಐಎಂಎಂ ಸದಸ್ಯರಾದ ನಜೀರ ಹೊನ್ಯಾಳ ಇತರರೂ ಸಹ ಸಾಥ್ ನೀಡಿದರು.
ಅರ್ಧ ಗಂಟೆ ನಂತರ ಪುನಃ ಸದನ ಸೇರಿದಾಗ ಕೈ ಸದಸ್ಯ ಮೇಯರ್ ಎದುರಿನ ಘಂಟೆ ಕಿತ್ತುಕೊಂಡು ಗೌನ್ ಧರಿಸಿ ಸಭೆ ನಡೆಸಿ ಎಂದು ಪಟ್ಟು ಹಿಡಿದಾಗ ಆಡಳಿತ ಪಕ್ಷದ ಸಂತೋಷ ಚವ್ಹಾಣ ಮತ್ತಿತರರು ಅಸಭ್ಯ ವರ್ತನೆ ಮಾಡಿದ ನಿರಂಜನ ಹಿರೇಮಠರನ್ನು ಹೊರ ಹಾಕಲು ಪಟ್ಟು ಹಿಡಿದಾಗ ಉಭಯ ಪಕ್ಷಗಳ ಕೂಗಾಟ ತಾರಕಕ್ಕೇರಿ ಮೇಯರ್ ಅನಿರ್ಧಿಷ್ಟ ಅವಧಿಗೆ ಸಭೆ ಮುಂದೂಡಿದರು.
ಬಾಕ್ಸ
ಮೊದಲ ಸಲ ಗೌನ್ ಧರಿಸದೆ ಮೇಯರ ಸ್ಥಾನಕ್ಕೆ ಅಗೌರವ ತೋರಿಸಿದ್ದು ಸರಿಯಲ್ಲ. ಬಿಜೆಪಿ ಸದಸ್ಯರ ಮಾತಿಗೂ ಬೆಲೆ ಕೊಡದ ಮೇಯರ ವರ್ತನೆ ಖಂಡನೆ.ಅಭಿವೃದ್ಧಿ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸಿ ಗೌನ್ ಧರಿಸಿ ಚರ್ಚಿಸಬೇಕಿತ್ತು. ಆದರೆ ಈ ಬಗ್ಗೆ ಗಮನಹರಿಸದ ಮೇಯರ ವಿರುದ್ಧ ಮುಂಬರುವ ದಿನಗಳಲ್ಲಿ ಹೋರಾಟವನ್ನು ಹಿರಿಯರ ಜೊತೆ ಚರ್ಚಿಸಿ ತೀರ್ಮಾನಿ ಸಲಾಗುವುದು.
ಸುವರ್ಣ ಕಲ್ಲಕುಂಟ್ಲ
ಕಾಂಗ್ರೆಸ್ ಪಾಲಿಕೆ ಸದಸ್ಯ
ಗೌನ್ ಧರಿಸುವ ಕುರಿತು ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಕೊಳ್ಳಬೇಕಿತ್ತು. ಅದರೆ ರಾಷ್ಟ್ರಪತಿ ಹಾಗೂ ಇತರ ಗಣ್ಯರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗೌನ್‌ಧರಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.
ಇಮಾಮಹುಸೇನ ಯಲಿಗಾರ
ಕಾಂಗ್ರೆಸ್ ಸದಸ್ಯ
ಹು-ಧಾ ಅವಳಿ ನಗರದ ಪ್ರಥಮ ಪ್ರಜೆ ಆದವರು ಹಿಂದಿನಿಂದಲೂ ಗೌನ್ ಧರಿಸುತ್ತ ಬಂದಿದ್ದಾರೆ. ಮೇಯರ ಆಗಿ ಅಧಿಕಾರವಹಿಸಿಕೊಳ್ಳುವ ಸಂದರ್ಭದಲ್ಲಿ ಗೌನ್ ಧರಿಸಿದ್ದ ಈರೇಶ ಅಂಚಟಗೇರಿ ಅವರು ಈಗ ಗೌನ್ ಧರಿಸಲು ನಿರಾಕರಿಸುತ್ತಿರುವುದು ಸರಿಯಲ್ಲ. ಪಾಲಿಕೆಯ ಸಭೆಯಲ್ಲಿ ನಿಯಮಗಳನ್ವಯ ಗೌನ್ ಧರಿಸುವ ವಿಷಯ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಗೌನ್ ಧರಿಸದೆ ಸಭೆಯಲ್ಲಿ ಪಾಲ್ಗೊಂಡು ಇಡೀ ಸಭೆಯನ್ನು ಅಗೌರವದಿಂದ ಮೇಯರ ಕಾಣುತ್ತಿದ್ದಾರೆ. ಜನರ ಹಲವಾರು ಸಮಸ್ಯೆಗಳು ಮತ್ತು ಅಭಿವೃದ್ಧಿ ಕೆಲಸಗಳಿವೆ. ಇದಾವುದಕ್ಕೂ ಆದ್ಯತೆ ನೀಡದ ಮೇಯರ ನಿಲುವು ಖಂಡನಾರ್ಹ.
ಡಾ.ಮಯೂರ ಮೋರೆ
ಕೈ ಪಕ್ಷದ ಪಾಲಿಕೆ ಸದಸ್ಯ
ಕೈ ವರ್ತನೆ ದುರದೃಷ್ಟಕರ
ಮಾಧ್ಯಮದವರ ಜೊತೆ ಮಾತನಾಡಿದ ಮೇಯರ ಈರೇಶ ಅಂಚಟಗೇರಿ, ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸದ ವಿರೋಧ ಪಕ್ಷದವರು ಗೌನ್ ವಿಷಯ ಮುಂದಿಟ್ಟು ಕೊಂಡು ಗಲಾಟೆ ಮಾಡಿದ್ದು ದುರದೃಷ್ಟಕರ ಎಂದಿದ್ದಾರೆ.
ಇಂದಿನ ಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿದ ಬಳಿಕ ನಿಮಗೆ ಅಗತ್ಯ ಎನಿಸಿದರೆ ಗೌನ್ ವಿಷಯವನ್ನೇ ಚರ್ಚಿಸೋಣ ಎಂದು ಭರವಸೆ ನೀಡಿದರರೂ ಒಪ್ಪದಿದ್ದಾಗ ಸಭೆಯನ್ನು ಅರ್ಧ ಗಂಟೆ ಮುಂದೂಡ ಲಾಯಿತು. ಒಂದು ಗಂಟೆಯ ನಂತರ ಸಭೆ ಆರಂಭ ಅಗುತ್ತಿದ್ದಂತೆಯೇ ಪುನಃ ಘೋಷಣೆಗಳನ್ನು ಕೂಗಿ ಗದ್ದಲ ಮಾಡಿದರು. ಹಲವು ಬಾರಿ ಮನವಿ ಮಾಡಿದರೂ ಸಹಕರಿಸದ ಹಿನ್ನಲೆಯಲ್ಲಿ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಬೇಕಾಯಿತು ಎಂದು ಹೇಳಿದ್ದಾರೆ.
ಬ್ರಿಟಿಷರ ಕಾಲದಿಂದ ಬಂದ ಗೌನ್ ಧರಿಸುವ ಪದ್ಧತಿಗೆ ತಿಲಾಂಜಲಿ ನೀಡಬೇಕು ಎಂಬ ಕಾರಣದಿಂದ ಇಂದು ಗೌನ್ ಧರಿಸಲಿಲ್ಲ. ಗೌನ್ ಧರಿಸುವ ಬಗ್ಗೆ ನಿಯಮಗಳಲ್ಲಿ ಉಲ್ಲೇಖವಿಲ್ಲ. ಇತ್ತೀಚೆಗೆ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸಿದ ಸಂದರ್ಭ ದಲ್ಲಿ ಸಹ ಗೌನ್ ಧರಿಸಿರಲಿಲ್ಲ. ಈ ಕುರಿತು ಈಗಾಗಲೇ ಸರಕಾರಕ್ಕೆ ಪತ್ರ ಕೂಡ ಬರೆದಿದ್ದೆನೆ. ಅಲ್ಲದೇ ಮುಖ್ಯಮಂತ್ರಿಗಳ ಜೊತೆಯೂ ಚರ್ಚಿಸಿದ್ದೆನೆ. ಗೌನ್ ಧರಿಸುವ ಬಗ್ಗೆ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಮೌಖಿಕವಾಗಿ ತಿಳಿಸಿದ್ದಾರೆ.
ಈಗ ಸರಕಾರದ ಆದೇಶವನ್ನು ನಿರೀಕ್ಷಿಸುತ್ತಿರುವೆ. ಒಟ್ಟಾರೆಯಾಗಿ ಬ್ರಿಟಿಷ್ ಕಾಲದ ಪರಂಪರೆಗಳಿಗೆ ಮಂಗಲ ಹಾಡುವ ಉದ್ದೇಶದಿಂದ ಗೌನ್ ಧರಿಸುತ್ತಿಲ್ಲ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ನಮಗೆ ಜನರ ಹಿತ ಕಾಯುವುದು ಮತ್ತು ಅಭಿವೃದ್ಧಿ ಕಾರ್ಯ ಮುಖ್ಯ. ಆದರೆ ವಿರೋಧ ಪಕ್ಷದವರು ಗೌನ್ ವಿಷಯವನ್ನು ಮುಂದಿಟ್ಟುಕೊಂಡು ಗಲಾಟೆ ಮಾಡಿ ಸಭೆ ನಡೆಸಲು ಅಡ್ಡಿಪಡಿಸಿದ್ದು ತಪ್ಪು ಎಂದಿದ್ದಾರೆ.
ಸಂಪ್ರದಾಯಕ್ಕೆ ಅಂಚಟಗೇರಿ ತಿಲಾಂಜಲಿ
ಮೈಸೂರು ರಾಜರ ಪೋಷಾಕಿಗೆ ಸಿಎಂಗೂ ಮನವಿ
ಹುಬ್ಬಳ್ಳಿ : ಅನಾದಿಕಾಲದಿಂದ ನಡೆದು ಬಂದ ಗೌನ ಧರಿಸುವ ಬ್ರಿಟಿಷ್ ಪದ್ಧತಿಗೆ ಹುಬ್ಬಲ್ಳಿ ಧಾರವಾಡ ಮಹಾನಗರದ ಪ್ರಥಮ ಪ್ರಜೆ ಈರೇಶ ಅಂಚಟಗೇರಿ ಕೈ ಬಿಟ್ಟಿದ್ದು ಇಂದು ಪ್ರಥಮ ಬಾರಿಗೆ ಪಾಲಿಕೆಯ ಮಾಸಿಕ ಸಾಮಾನ್ಯ ಸಭೆಯಲ್ಲೂ ಅದಕ್ಕೆ ತಿಲಾಂಜಲಿ ಇಟ್ಟಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಗಳನ್ನೂ ಸಹ ಗೌನ್ ಧರಿಸದೇ ಸ್ವಾಗತಿಸಿದ್ದರಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ವೇಳೆ ಸಹ ಗೌನ ಧರಿಸದೇ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.
ಸ್ವಾತಂತ್ರ್ಯಾನಂತರ ದೇಶ ಹತ್ತು ಹಲವು ಬದಲಾವಣೆಗಳನ್ನು ಕಂಡಿದ್ದರೂ, ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದಂತೆ ಈ ಗೌನ್ ಧರಿಸುವ ಪರಿಪಾಠ ಇನ್ನೂ ಮುಂದುವರಿದುಕೊಂಡು ಬಂದಿರುವುದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ಕಂಡುಬರುತ್ತಿಲ್ಲ. ಬದಲಿಗೆ ನಮ್ಮತನವನ್ನು ಬೆಳೆಸಿಕೊಳ್ಳಬೇಕು ಎನ್ನುವ ಇಚ್ಚಾಶಕ್ತಿಯ ಕೊರತೆ ಕಂಡು ಬಂದಿದ್ದು ಅದಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಅಂಚಟಗೇರಿ ಹೆಜ್ಜೆ ಹಾಕಿದ್ದಾರೆ.
ಇತಿಹಾಸ : ಸಿಟಿ ಆಫ್ ಲಂಡನ್ ಕಾರ್ಪೋರೇಶನ್ ಮೇಯರ್ ಈ ವಿಶಿಷ್ಟ ಪೋಷಾಕನ್ನು ಇಸವಿ 1189ರಿಂದ ಧರಿಸಲು ಆರಂಭಿಸಿದ್ದರು. ಬ್ರಿಟಿಷರ ವಶದಲ್ಲಿದ್ದ ಭಾರತದಲ್ಲೂ ಈ ಪರಿಪಾಠ ಅಂದು ಆರಂಭವಾಗಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಸರಿಯಾಗಿ ಚಿಂತನೆ ಮಾಡಿದರೆ ಮೇಯರ್ ಗೌನ್ ಪರಿಪಾಠ ಯಾಕೆ ನಮ್ಮ ರಾಜ್ಯದ ಮಹಾನಗರಪಾಲಿಕೆಗಳಲ್ಲಿ ಮೇಯರ್‌ಗಳು ಇನ್ನೂ ಪಾಲಿಸಿಕೊಂಡು ಬರಬೇಕು? ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಮಹಾರಾಜರ ಪೋಷಾಕ ನ್ನು ಯಾಕೆ ಸರಕಾರೀ ಕಾರ್ಯಕ್ರಮಗಳಲ್ಲಿ ಮೇಯರ್ ಧರಿಸಬಾರದು ಎಂದು ಅಂಚಟಗೇರಿ ಮೇಯರ್ ಗಾದಿ ಏರಿದ ತಕ್ಷಣ ಈ ಹೊಸ ಚಿಂತನೆಗೆ ನಾಂದಿ ಹಾಡಿ ಹುಬ್ಬಳ್ಳಿಗೆ ಬಂದ ರಾಜ್ಯದ ದೊರೆಯನ್ನು ಸ್ವಾಗತಿಸಿದ್ದರು.
ರಾಷ್ಟ್ರಪತಿಗಳು ಬರುವ ವೇಳೆ ಸರಕಾರದ ಸೂಚನೆ ಬಂದರೆ ಗೌನ ಧರಿಸುವುದಾಗಿ ಹೇಳಿದ್ದರೂ ಯಾವುದೇ ಸೂಚನೆ ಬರದ ಕಾರಣ ಧರಿಸಿರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ವಿವರಿಸಿ ನಮ್ಮ ಭವ್ಯ ಸಂಸ್ಕೃತಿಯ ಅರಿವು ಮೂಡಿಸಲು ಅನುಕೂಲವಾಗುವ ವಸ್ತ್ರ ಸಂಹಿತೆ ಧರಿಸಲು ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಅಂಚಟಗೇರಿ ’ಸಂಜೆದರ್ಪಣ’ಕ್ಕೆ ತಿಳಿಸಿದರು.
ಕಾರ್ಯಕ್ರಮಗಳಲ್ಲಿ ಮೈಸೂರು ಪೇಟ ತೊಡಿಸುವ ಪದ್ಧತಿಯಿದ್ದೇ ಇದೆ. ರಾಜ್ಯದಲ್ಲಿರುವ ಹತ್ತು ಮಹಾನಗರಪಾಲಿಕೆ ಮಹಾಪೌರರು ಸಹ ಮೈಸೂರು ಪೇಟಾ ಮೈಸೂರು ಮಹಾರಾಜರ ಪೋಷಾಕುಗಳನ್ನು ಧರಿಸಲು ಅನುವು ಮಾಡಿದರೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.