ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ, ಉತ್ತರ ಕರ್ನಾಟಕದ ಧ್ವನಿ ಬಸವರಾಜ ಹೊರಟ್ಟಿಯವರಿಗೆ ಸೆಡ್ಡು ಹೊಡೆಯಲು ಅಭ್ಯರ್ಥಿಗಳ ಹುಡುಕಾಟಕ್ಕೆ ಬಿಜೆಪಿ ಮುಂದಾಗಿದ್ದು, ನಿನ್ನೆ ನಗರದಲ್ಲಿ ಸ್ವತಃ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಪದವೀಧರ ಕ್ಷೇತ್ರವನ್ನು ಕೈವಶ ಮಾಡಿಕೊಂಡರೂ ಪಶ್ಚಿಮ ಕ್ಷೇತ್ರ ಇನ್ನೂ ಕೇಸರಿ ಪಡೆಗೆ ಕಗ್ಗಂಟಾಗಿಯೇ ಉಳಿದಿದ್ದು ಕಳೆದ 7 ಅವಧಿಯಿಂದ ಶಿಕ್ಷಕರ ಸಮಸ್ಯೆಗಳಿಗೆ ಪರ್ಯಾಯ ಎಂಬಂತಾಗಿರುವ ಹೊರಟ್ಟಿ ಎದುರು ಗೆಲುವಿನ ಸನಿಹಕ್ಕೆ ಬರುವುದು ಕಷ್ಟವಾಗಿದೆ. ಕಳೆದ ಬಾರಿ ಸೆಡ್ಡು ಹೊಡೆದಿದ್ದ ಮಾ. ನಾಗರಾಜ ಭರವಸೆ ಮೂಡಿಸಿದ್ದರಾದರೂ ಕೊನೆಯಲ್ಲಿ ಮುಗ್ಗರಿಸಿದ್ದರು.
ಅವಿಭಾಜ್ಯ ಧಾರವಾಡ ಜಿಲ್ಲೆ ಹಾಗೂ ಕಾರವಾರ ಜಿಲ್ಲೆ ಒಳಗೊಂಡ ಶಿಕ್ಷಕರ ಕ್ಷೇತ್ರಕ್ಕೆ ಮುಂದಿನ ವರ್ಷ ಮಧ್ಯಂತರದೊಳಗೆ ಚುನಾವಣೆ ನಿಶ್ಚಿತವಾಗಿದ್ದು, ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿಯಲ್ಲಿ ಈ ಬಾರಿ ಅನೇಕ ಆಕಾಂಕ್ಷಿಗಳಿದ್ದು ಈಗಾಗಲೇ ತಮ್ಮದೇ ಆದ ಲಾಬಿ ಆರಂಭಿಸಿದ್ದಾರೆ.
ಪದವೀಧರ ಕ್ಷೇತ್ರದಿಂದ ಬದಲಾವಣೆಗೆ ಓಂಕಾರ ಹಾಕಿದ್ದ ಮಾಜಿ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ರಚನಾತ್ಮಕ ಕಾರ್ಯಗಳ ಮೂಲಕ ಶಿಕ್ಷಕಸ್ನೇಹಿ ಎಂದೇ ಕರೆಸಿಕೊಳ್ಳುತ್ತಿರುವ ಹೊಸ ಭರವಸೆ ಸಂದೀಪ ಬೂದಿಹಾಳ, ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಉತ್ತರ ಕನ್ನಡ ಮೂಲದ ಸುನೀಲ ದೇಶಪಾಂಡೆ ಸಹಿತ ಅನೇಕ ಆಕಾಂಕ್ಷಿಗಳಿದ್ದಾರೆ.
ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಹ ಶಿಕ್ಷಕರ ಕ್ಷೇತ್ರಕ್ಕೆ ಎಂಟ್ರಿ ಕೊಡುವರೆಂಬ ಗುಸು ಗುಸು ಅಲ್ಲಲ್ಲಿ ಇದ್ದು, ಅದಕ್ಕೆ ಪೂರಕವಾಗಿ ಕೋವಿಡ್ ಸಂದರ್ಭದಲ್ಲಿ ಕಾರ್ಯಕ್ರಮ ಏರ್ಪಡಿಸಿ, ಕಿಟ್ ಹಂಚಿಕೆ ಮಾಡಿರುವುದು ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ಸಂಘದ ಪ್ರಮುಖರ ನಿರ್ಧಾರವೇ ಅಂತಿಮವಾಗಿದ್ದು, ಹಾಗಾಗಿ ಸಂಘ ನಿಷ್ಠೆಗೆ ಆದ್ಯತೆ ದೊರೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಒಬಿಸಿ ಕೂಗು ಮುನ್ನೆಲೆಗೆ
ಧಾರವಾಡ ಜಿಲ್ಲೆಯಲ್ಲಿ ಹು.ಧಾ. ಪೂರ್ವ ಮೀಸಲು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲವನ್ನು ಬಹುಸಂಖ್ಯಾತರೇ ಪ್ರತಿನಿಧಿಸುತ್ತಿದ್ದು, ಮುಂದಿನ ಚುನಾವಣೆಯಲ್ಲೂ ಅದು ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು, ಪರಿಷತ್ ಚುನಾವಣೆಯಲ್ಲಿ ಹಿಂದುಳಿದವರಿಗೆ ನೀಡಬೇಕೆಂಬ ವಾದ ಮುನ್ನೆಲೆಗೆ ಬಂದಿದೆ. ಶಿಕ್ಷಕರ ನಾಡಿ ಮಿಡಿತ ಬಲ್ಲವರು ಮಾತ್ರ ಹೊರಟ್ಟಿಯಂತಹ ಘಟಾನುಘಟಿಯೆದುರು ಸೆಣಸಾಡಬಹುದಾಗಿದೆ. ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದವರನ್ನು ಮತಬ್ಯಾಂಕ್ ಆಗಿ ಬಿಜೆಪಿಯಲ್ಲಿ ಬಳಸಿಕೊಳ್ಳುತ್ತಿದ್ದರೂ ಯಾವುದೇ ಅವಕಾಶ ನೀಡದಿರುವುದು ಈಗಾಗಲೇ ಕಮಲ ಪಾಳೆಯದಲ್ಲಿ ಸಣ್ಣ ಸಂಚಲನ ಸೃಷ್ಟಿಸಿದೆ. ಕುರುಬ, ಎಸ್‌ಎಸ್‌ಕೆ ಸಹಿತ ಅನೇಕ ಹಿಂದುಳಿದ ಸಮುದಾಯಗಳ ಧುರೀಣರು ವಂಚಿತರಾಗುತ್ತಿದ್ದಾರೆಂಬ ಸಣ್ಣ ಬೆಂಕಿಯ ಕಿಡಿ ಕಾಂಗ್ರೆಸ್‌ನ ’ಅಲ್ಪಸಂಖ್ಯಾತ’ದಂತೆ ಹೊತ್ತಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.
ಹೊರಟ್ಟಿ ಕುತೂಹಲ!
ಬಸವರಾಜ ಹೊರಟ್ಟಿಯವರು ಸ್ಪರ್ಧೆಗಿಳಿಯುವುದು ಇನ್ನೊಂದು ಅವಧಿಗೆ ಕಣಕ್ಕಿಳಿಯುವುದು ನಿಶ್ಚಿತವೆಂಬುದು ಇತ್ತೀಚಿನ ಅವರ ಸತತ ಪ್ರವಾಸ ಮತ್ತು ಚಟುವಟಿಕೆಗಳಿಂದ ಖಚಿತವಾಗಿದೆ. ಆದರೆ ಈಗ ಪರಿಷತ್ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಹೊರಟ್ಟಿಯವರೇ ಕಮಲ ಪಾಳೆಯದಿಂದ ನಿಂತರೂ ಯಾವುದೇ ಅಚ್ಚರಿಯಿಲ್ಲ ಎಂಬ ಮಾತುಗಳು ಪದೆ ಪದೇ ಕೆಲ ಪ್ರಭಾವಿ ಬಿಜೆಪಿ ಮುಖಂಡರ ಬಾಯಿಯಿಂದಲೇ ಬರುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಏನಾಗಬಹುದೆಂಬುದು ಅಚ್ಚರಿಗೆ ಕಾರಣವಾಗಿದೆ. ಇನ್ನೊಬ್ಬ ಪ್ರಭಾವಿ ಶಿಕ್ಷಕ ಮುಖಂಡ ಬಸವರಾಜ ಗುರಿಕಾರ ಕಾಂಗ್ರೆಸ್ ಹುರಿಯಾಳಾಗುವ ಸಾಧ್ಯತೆಗಳಿವೆ.