ದಿಲ್ಲಿಯಲ್ಲೇ ಬೀಡುಬಿಟ್ಟ ಪರಿಷತ್ ಆಕಾಂಕ್ಷಿಗಳು
ಹುಬ್ಬಳ್ಳಿ: ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಅಂಗಳದಲ್ಲಿ ತೀವ್ರ ಕಸರತ್ತು ನಡೆದಿದ್ದು, ಇಂದು ಅಥವಾ ನಾಳೆಯೊಳಗೆ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ಸುಮಾರು ಐವತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಅಭ್ಯರ್ಥಿಗಳ ಆಯ್ಕೆಗೆ ಸೂತ್ರ ಯಾವುದು ಎಂಬುದನ್ನು ಅಂತಿಮಗೊಳಿಸಿದ್ದು ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಹಿಂದುಳಿದವರಿಗೆ ಎರಡು, ಲಿಂಗಾಯತ, ಎಸ್ ಸಿ ಎಸ್ಟಿ ಮತ್ತು ಅಲ್ಪಸಂಖ್ಯಾತರಿಗೆ ಒಂದು ಎನ್ನುವ ಸೂತ್ರಕ್ಕೆ ಮಣೆ ಹಾಕುವರೋ ಕುರುಬ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡುವರೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ಚುನಾವಣೆಯಲ್ಲಿ ಸೋತವರಿಗೆ ಅವಕಾಶ ನೀಡಬಾರದು ಎಂಬ ಸೂತ್ರಕ್ಕೆ ಈಗಾಗಲೇ ವರಿಷ್ಠರು ಬಂದಿದ್ದಾರೆನ್ನಲಾಗಿದ್ದು ಅಲ್ಪಸಂಖ್ಯಾತ ಕೋಟಾದಡಿ ಮುಸ್ಲಿಂ ಸಮುದಾಯವೋ, ಕ್ರಿಶ್ಚಿಯನ್ನರೋ ಎಂಬುದು ಸವಾಲಾಗಿದ್ದು ಮುಸ್ಲಿಂರೊಬ್ಬರಿಗೆ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಲ್ಪಸಂಖ್ಯಾತರ ಕೋಟಾದಡಿ ಧಾರವಾಡ ಅಂಜುಮನ್ ಇಸ್ಲಾಂ ಅಧ್ಯಕ್ಷರೂ ಆಗಿರುವ ಇಸ್ಮಾಯಿಲ್ ತಮಟಗಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸಹಿತ ನಾಲ್ಕೈದು ಹೆಸರು ಪಟ್ಟಿಯಲ್ಲಿದ್ದು ಯಾರಿಗೆ ಅದ್ರಷ್ಟ ಒಲಿಯಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬೆಂಗಳೂರಿನ, ಕೊಪ್ಪಳದ, ಕಲಬುರಗಿ ಮೂಲದ ಹೆಸರುಗಳು ಇವೆ ಎನ್ನಲಾಗಿದೆ.
ತಮಟಗಾರ ಅವರ ಪರವಾಗಿ ಸ್ವತಃ ಸಿಎಂ ಸಹ ಹಸಿರು ನಿಶಾನೆ ತೋರಿದ್ದು, ಸಚಿವ ಜಮೀರ ಅಹ್ಮದ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಹ ಬ್ಯಾಟಿಂಗ್ ಮಾಡಿದ್ದಾರೆನ್ನಲಾಗಿದೆ. ಲಾಡ್ ಅವರೂ ದಿಲ್ಲಿಯಲ್ಲೇ ಇದ್ದಾರೆ.