ಧಾರವಾಡ: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ನಗರದ ಕಡಪಾ ಮೈದಾನದಲ್ಲಿ ಫೆ. 27 ರಂದು ಸಂಜೆ 4 ಗಂಟೆಗೆ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳು ಮತ್ತು ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯ ಹಿಂದೆ ಕೆಲ ದೇಶ ವಿರೋಧಿ ಮತ್ತು ಸಮಾಜಘಾತುಕ ಶಕ್ತಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣದ ಹಿಂದಿರುವ ಪ್ರಭಾವಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿರುವೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪನರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಕಲಾಪವನ್ನು ಹಾಳು ಮಾಡಿದ ಕಾಂಗ್ರೆಸ್ ಮುಖಂಡರ ಮಾತಿಗೆ ಜನರು ಮರಳಾಗುವುದಿಲ್ಲ ಎಂದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಬಸವರಾಜ ಗರಗ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಈರೇಶ ಅಂಚಟಗೇರಿ, ಮುಖಂಡರಾದ ಶಶಿಮೌಳಿ ಕುಲಕರ್ಣಿ, ಟಿ.ಎಸ್.ಪಾಟೀಲ, ಈಶ್ವರ ಗಾಣಿಗೇರ, ಶ್ರೀನಿವಾಸ ಕೋಟ್ಯಾನ, ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.