ಹುಬ್ಬಳ್ಳಿ-ಧಾರವಾಡ ಸುದ್ದಿ

ಪರಿಷತ್: ಕೇಸರಿ ಪಡೆಗೆ ಏದುಸಿರು ತಂದ ಕೈ ಪಡೆ; ಬೆಳಗಾವಿ: ಬಿಜೆಪಿಗೆ ಬಗಣಿ ಗೂಟ; ಹಾಸನದಲ್ಲಷ್ಟೇ ಖಾತೆ ತೆರೆದ ಜೆಡಿಎಸ್

ಬಿಜೆಪಿ – 12, ಕಾಂಗ್ರೆಸ್ -11, ಜೆಡಿಎಸ್– 1. ಪಕ್ಷೇತರ -1

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಡ ಪಕ್ಷ ಅಲ್ಪ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರೂ, ಕೈ ಪಡೆ ಸಮಬಲದ ಪೈಪೋಟಿ ನೀಡಿದ್ದು, ಜೆಡಿಎಸ್ ಹಾಸನದಲ್ಲಿ ಮಾತ್ರ ಖಾತೆ ತೆರೆದಿದ್ದು, ಹಳೆ ಮೈಸೂರ ಭಾಗದಲ್ಲೂ ಧೂಳೀಪಟವಾಗಿದೆ.


ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 11. ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಿದ್ದು ಹಾಗೂ ಬೆಳಗಾವಿಯಲ್ಲಿ ಪಕ್ಷೇತರ ಜಯದತ್ತ ಮುನ್ನಡೆದಿದ್ದಾರೆ.
ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು ನಗರ, ಬಳ್ಳಾರಿಗಳನ್ನು ಬಿಜೆಪಿ ಕಿತ್ತುಕೊಂಡಿದ್ದರೂ ಇಡೀ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿಯಲ್ಲಿ ಕಮಲ ಪಡೆ ಮುಗ್ಗರಿಸಿದ್ದು ಮುಟ್ಟಿ ನೋಡಿಕೊಳ್ಳುವಂತಹ ಆಘಾತ ಅನುಭವಿಸಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ರಮೇಶ ಜಾರಕಿಹೊಳಿ ಮತ್ತು ಲಕ್ಷಿö್ಮ ಹೆಬ್ಬಾಳ್ಕರ್ ಇಬ್ಬರೂ ತಮ್ಮ ಸಹೋದರರನ್ನು ವಿಧಾನಸೌಧಕ್ಕೆ ಬಲಗಾಲಿಡಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಸೋಲಿಸುವುದಕ್ಕಾಗಿ ನಿಂತಿದ್ದ ಲಖನ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಿರುವುದು ವಿಪರ್ಯಾಸವಾಗಿದೆ.


ಹಳೆಯ ಹುಲಿ ಬಳ್ಳಾರಿಯಲ್ಲಿ ಕೆ.ಸಿ.ಕೊಂಡಯ್ಯ, ಶಿವಮೊಗ್ಗದಲ್ಲಿ ಪ್ರಸನ್ನಕುಮಾರ ಅಲ್ಲದೇ ಚಿಕ್ಕಮಗಳೂರಲ್ಲಿ ಕೇವಲ 6 ಮತಗಳ ಸೋಲು ಕಾಂಗ್ರೆಸ್ಸಿಗೆ ಆಘಾತ ತಂದಿದೆ.ತುಮಕೂರು ಮತ್ತು ಮಂಡ್ಯ ಎರಡು ಕ್ಷೇತ್ರಗಳಲ್ಲಿ ರಾಜೇಂದ್ರ ಹಾಗೂ ದಿನೇಶ ಗೂಳಿಗೌಡರ ಗೆಲುವು ತೆನೆ ಹೊತ್ತ ಮಹಿಳೆಗೆ ಮಾರಣಾಂತಿಕ ಪೆಟ್ಟು ನೀಡಿದೆ.
ಬೆಳಗಾವಿ: ದ್ವಿ ಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮೊದಲ ಸುತ್ತಿನಲ್ಲೇ 3715 ಮತಗಳ ಅಂತರದಿAದ ಜಯ ಸಾಧಿಸಿದ್ದು 2ನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 2526 ಮತ ಪಡೆ ವಿಜಯಿಯಾಗಿದ್ದಾರೆ. ಅಲ್ಲದೇ ಈ ಗೆಲುವಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಾತ್ರವೂ ದೊಡ್ಡದಿದ್ದು, ಹಟ್ಟಿಹೊಳಿ ಗೆಲ್ಲಿಸಲೇ ಬೇಕೆಂದು ಹಠಕ್ಕೆ ಬಿದ್ದು ಗೋಕಾಕ ಕ್ಷೇತ್ರದಲ್ಲಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ 2454 ಮತ ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.


ಬೀದರ್: ಬೀದರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು ಬಿಜೆಪಿಯ ಪ್ರಕಾಶ ಖಂಡ್ರೆ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 227 ಮತಗಳ ಅಂತರದಿAದ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಾಜಶೇಖರ ಪಾಟೀಲರ ಸೋದರ ಭೀಮರಾವ್ ಅವರು 1789 ಮತಗಳನ್ಮು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ 1562 ಮತಗಳನ್ನು ಪಡೆದಿದ್ದಾರೆ.

ಧಾರವಾಡ : ಸಲೀಮ್, ಪ್ರದೀಪ ಜಯಭೇರಿ

ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್‌ನದ್ದೆ ಹವಾ

ಶೆಟ್ಟರ್ ಓಟಕ್ಕೆ ತಡೆ ಹಾಕಿದ ಹಾವೇರಿ

ಧಾರವಾಡ: ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಅಜಾತ ಶತ್ರು ಎಂದೆ ಕರೆಸಿಕೊಳ್ಳುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ೮೩೭ ಮತಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಧಾರವಾಡ, ಹಾವೇರಿ, ಗದಗ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಾಂಗ್ರೆಸ್‌ನ ಸಲೀಮ್ ಅಹ್ಮದ ಪ್ರಥಮ ಪ್ರಾಶಸ್ತ್ಯದ ೩೩೩೪ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಅಂತಿಮ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಶ್ ಶೆಟ್ಟರ್ ೨೪೯೭ ಮತಗಳನ್ನು ಪಡೆದಿದ್ದು ಅವರು ಸಹ ಗೆಲುವಿನ ದಡ ಮುಟ್ಟುವುದು ನಿಶ್ಚಿತವಾಗಿದೆ.
ಬಿಜೆಪಿಗೆ ಮಗ್ಗುಲ ಮುಳ್ಳಾಗಿದ್ದಾರೆಂದೇ ನಿರೀಕ್ಷಿಸಲಾಗಿದ್ದ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ೧೨೧೭ ಮತಗಳನ್ನು ಪಡೆದಿದ್ದಾರಲ್ಲದೇ ಪ್ರದೀಪ್ ಪ್ರಥಮ ಪ್ರಾಶಸ್ತ್ಯದ ಗೆಲುವಿಗೆ ಮುಳ್ಳಾದರು. ಕಳೆದ ಬಾರಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಪ್ರಥಮ ಪ್ರಾಶಸ್ತ್ಯದಲ್ಲಿ ಜಯ ಸಾಧಿಸಿದ್ದರು.
ಪಂಚಮಸಾಲಿ ಲೆಕ್ಕಾಚಾರ ಅಲ್ಲದೇ ಹಾವೇರಿಯ ಬಿಜೆಪಿಯ ಮುಖಂಡರ ಒಳ ಏಟು ಶೆಟ್ಟರ್ ಮೇಲೆ ಬೀಳಬಹುದೆಂಬ ಲೆಕ್ಕಾಚಾರ ಹುಸಿಯಾಗಿ,ಬಿಜೆಪಿ ಸಮಾಧಾನದ ನಿಟ್ಟುಸಿರು ಬಿಟ್ಟರೂ ಹಲವು ಪಕ್ಷದಲ್ಲಿನ ಭಿನ್ನಮತವನ್ನು ಬೀದಿಗೆ ತಂದಿದೆ.

ಹಾಸನ: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಆರಂಭದಿ0ದಲೂ ಮುನ್ನಡೆ ಸಾಧಿಸಿಕೊಂಡು ಬಂದು ಅಂತಿಮವಾಗಿ 1430 ಮತಗಳ ಅಂತರ ದಿಂದ ಜಯ ಸಾಧಿಸಿದ್ದು ದೇವೆಗೌಡರ ಕುಟುಂಬದ ಮತ್ತೊಂದು ಕುಡಿ ಶಕ್ತಿ ಸೌಧ ಪ್ರವೇಶಿಸಿದಂತಾಗಿದೆ.
ಸೂರಜ್ 2247 ಮತ ಪಡೆದರೆ, ಕಾಂಗ್ರೆಸ್ ನ ಎಂ.ಶ0ಕರ್ 714, ಬಿಜೆಪಿ ಯ ವಿಶ್ವನಾಥ್ 435 ಮತಗಳನ್ನಷ್ಟೇ ಪಡೆದರು.
ಕೊಡಗು: 102 ಮತಗಳ ಅಂತರದಿAದ ಬಿಜೆಪಿಯ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದು, ಕೊಡಗು ವಿಧಾನಪರಿಷತ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ.
ಬಿಜೆಪಿಯ ಸುಜಾ ಅವರು 705 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಡಾ.ಮಂಥರ್‌ಗೌಡ ಅವರು 603 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದರು.
ಬೆಂಗಳೂರು ನಗರ: ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಗೋಪಿನಾಥ ರೆಡ್ಡಿಯವರು ಭರ್ಜರಿ ಗೆಲುವು ಸಾಧಿಸಿದೆ.
ತೀವ್ರ ಕುತೂಹಲ ಮೂಡಿಸಿದ್ದಂತ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಟಿವೀರ ಕೆಜಿಎಫ್ ಬಾಬು ಸೋಲು ಕಂಡಿದ್ದಾರೆ.
ಉತ್ತರ ಕನ್ನಡ : ಕಾರವಾರ ಜಿಲ್ಲೆಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದು ಅಲ್ಲಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕಗೆ ಪರಿಷತ್ ಚುನಾವಣೆಯಲ್ಲೂ ಅದೃಷ್ಟ ಕೈ ಕೊಟ್ಟಿದ್ದು ಸೋಲುಂಡಿದ್ದಾರೆ. ದೇಶಪಾಂಡೆ ಮತ್ತು ಹೆಬ್ಬಾರ ನಡುವಣ ಫೈಟ್‌ನಲ್ಲಿ ಉಸ್ತುವಾರಿ ಸಚಿವರೇ ನಗೆ ಬೀರಿದ್ದಾರೆ.ಉಳವೇಕರ್‌ಗೆ 1514 ಮತಗಳು ಬಂದರೆ, ಭೀಮಣ್ಣ 1331 ಮತಗಳನ್ನು ಪಡೆದರು.
ಚಿತ್ರದುರ್ಗದಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ಬಿಜೆಪಿಯ ಕೆ.ಎಸ್. ನವೀನ ಗೆಲುವು ಸಾಧಿಸಿದ್ದು ಕಾಂಗ್ರೆಸ್ ತೆಕ್ಕೆಯಿಂದ ಕಿತ್ತುಗೊಂಡಿದೆ. ಸೋಮಶೇಖರ ಪರಾಭವಗೊಂಡಿದ್ದಾರೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ಸಿನ ಪ್ರಸನ್ನಕುಮಾರ ಗೆಲುವು ನಿಶ್ಚಿತ ಎನ್ನಲಾಗುತ್ತಿದ್ದರೂ ಅಂತಿಮವಾಗಿ ಬಿಜೆಪಿ ಸಂಘಟಿತ ಯತ್ನ ಡಿ.ಎಸ್.ಅರುಣರನ್ನು ದಡ ಮುಟ್ಟಿಸಿದೆ.


ತುಮಕೂರಿನಲ್ಲಿ ಕೆ.ಎನ್ .ರಾಜಣ್ಣರ ಪುತ್ರ ರಾಜೇಂದ್ರ ಗೆಲುವು ಸಾಧಿಸಿದ್ದಾರೆ.ಜೆಡಿಎಸ್ ಭದ್ರಕೋಟೆಯಲ್ಲಿ ಕೈ ಗೆಲುವು ಸಾಧಿಸಿದೆ.
ಚಿಕ್ಕಮಗಳೂರು : ತೀವ್ರ ಪೈಪೋಟಿಗೆ ಕಾರಣವಾದ ಇಲ್ಲಿ ಹಾಲಿ ಸದಸ್ಯ ಬಿಜೆಪಿಯ ಎಂ.ಕೆ.ಪ್ರಾಣೇಶ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡರ ವಿರುದ್ದ 6 ಮತಗಳ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ: ಕಾಂಗ್ರೆಸ್ಸಿನ ಕೋಂಡಯ್ಯ ಪರಾಭವಗೊಂಡಿದ್ದು ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.ವೈ.ಎ. ಸತೀಶ 757 ಮತಗಳಿಸಿ ಹಳೆಯ ಹುಲಿಗೆ ಸೋಲಿನ ರುಚಿ ತೋರಿಸಿದ್ದಾರೆ.
ರಾಯಚೂರು : ಕಾಂಗ್ರೆಸ್ಸಿನ ಶರಣ ಪಾಟೀಲ ಬಯ್ಯಾಪುರ 400 ಮತಗಳ ಅಂತರದಿ0ದ ಗೆಲುವು ದಾಖಲಿಸಿದ್ದಾರೆ.
ಮಂಗಳೂರು : ದ್ವಿ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಇಬ್ಬರೂ ಗೆಲುವು ಸಾಧಿಸಿದ್ದಾರೆ.
ಮೈಸೂರು : ಸಿದ್ದರಾಮಯ್ಯ ಬೆಂಬಲಿಗ ಡಾ.ತಿಮ್ಮಯ್ಯ ಪ್ರಥಮ ಪ್ರಾಶಸ್ತö್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ರಘು ಕೌಟಿಲ್ಯ ಗೆಲುವು ಸಾಧಿಸಿದ್ದು ಜೆಡಿಎಸ್ ಹೇಳ ಹೆಸರಿಲ್ಲದಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ನ ಗೂಳಿಗೌಡ ಜೆಡಿಎಸ್‌ನ ಅಪ್ಪಾಜಿಗೌಡ ಅವರ ವಿರುದ್ದ ವಿಜಯಿಯಾಗಿದ್ದು, ಮತದಾನದ ದಿನವೇ ಬಿಜೆಪಿ ಅಭ್ಯರ್ಥಿ ಬೂಕನಕೆರೆ ಮಂಜು ಸೋಲೊಪ್ಪಿಕೊಂಡಿದ್ದರು.
ವಿಜಯಪುರದಲ್ಲಿ ಸುನೀಲ ಪಾಟೀಲ 2835 ಮತಗಳ ಗೆಲುವು ಸಾಧಿಸಿದ್ದರೆ ಇನ್ನೊಂದು ಸ್ಥಾನದಲ್ಲಿ ಬಿಜೆಪಿಯ ಪಿ.ಎಚ್ ಪೂಜಾರ ಗೆಲುವು ಧಕ್ಕಿಸಿಕೊಂಡಿದ್ದಾರೆ.
ಬೆ0ಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ಸಿನ ರವಿ ಮತ್ತೊಮ್ಮೆ ಜಯಭೇರಿ ಬಾರಿಸಿದ್ದಾರೆ.

 

 

 

administrator

Related Articles

Leave a Reply

Your email address will not be published. Required fields are marked *