ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡದಲ್ಲಿ ಮಹಿಳೆಯರ ಟೆನಿಸ್ ಟೂರ್ನಿ ಆರಂಭವಾಗಲಿ

ವಿದ್ಯಾಕಾಶಿಯಲ್ಲಿ ಐಟಿಎಫ್ ಪುರುಷರ ವಿಶ್ವ ಟೆನಿಸ್ ಟೂರ್ನಿಗೆ ಮೊಹಮ್ಮದ್ ಅಜರುದ್ದೀನ್ ಚಾಲನೆ

ಧಾರವಾಡ: ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಆರಂಭಗೊಂಡಿರುವ ಅಂತರರಾಷ್ಟ್ರೀಯ ಪುರುಷರ ಟೆನಿಸ್ ಟೂರ್ನಿ ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಸಾಂಕೇತಿಕವಾಗಿ ಟೆನಿಸ್ ಆಡುವ ಮೂಲಕ ಮಾಜಿ ಸಂಸದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಹಾಗೂ ಸಚಿವ ಸಂತೋಷ ಲಾಡ್ ಟೂರ್ನಿ ಉದ್ಘಾಟಿಸಿದರು.

ಮೊಹಮ್ಮದ ಅಜರುದ್ಧಿನ್ ಮಾತನಾಡಿ, ಧಾರವಾಡದಲ್ಲಿ ಮಹಿಳಾ ಟೆನಿಸ್ ಪಂದ್ಯಾವಳಿಗಳು ಸಹ ಮುಂದಿನ ದಿನಮಾನಗಳಲ್ಲಿ ಆಯೋಜನೆಗೊಳ್ಳಲಿ ಎಂದರು.


ತಮಗೆ ಹೆಚ್ಚಾಗಿ ಕ್ರಿಕೆಟ್ ಉದ್ಘಾಟನೆಗೆ ಆಹ್ವಾನವಿರುತ್ತದೆ. ಕ್ರಿಕೆಟ್‌ಗೆ ವಿಶ್ವದಲ್ಲೆಡೆ ಹೆಚ್ಚು ಪ್ರೋತ್ಸಾಹ ದೊರೆತಂತೆ ಉಳಿದ ಆಟಗಳಿಗೂ ಹೆಚ್ಚೆಚ್ಚು ಉತ್ತೇಜನ, ಪ್ರೋತ್ಸಾಹ ದೊರೆಯಬೇಕೆಂಬ ಉದ್ದೇಶದಿಂದ ನಾನು ಟೆನಿಸ್ ಟೂರ್ನಿಗೆ ಬಂದಿರುವುದಾಗಿ ಅವರು ತಿಳಿಸಿದರು. ಈ ಪುರುಷರ ಟೆನಿಸ್ ಪಂದ್ಯಾವಳಿಯಲ್ಲಿ ವಿದೇಶಿ ಆಟಗಾರರು ಸಹ ಪಾಲ್ಗೊಳ್ಳುತ್ತಿ ರುವುದರಿಂದ ಅವರಿಗೆ ಸ್ಥಳೀಯ ಪ್ರದೇಶದ ಬಗ್ಗೆ ಪರಿಚಯವಾಗುತ್ತದೆ. ಈ ಬಾರಿ ಕೇವಲ ಪುರುಷರಿಗೆ ಈ ಪಂದ್ಯಾವಳಿ ಸೀಮಿತವಾಗಿದ್ದು, ಮುಂದಿನ ಬಾರಿ ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಟೆನಿಸ್ ಆಯೋಜಿಸಿದ್ದಲ್ಲಿ ಹೆಚ್ಚು ಆಕರ್ಷಣೀಯ ವಾಗಲಿದೆ ಎಂದರು.


ಪಂದ್ಯಾವಳಿ ಉದ್ಘಾಟಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಧಾರವಾಡದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಿರುವ ಮೊಹಮ್ಮದ್ ಅಜರುದ್ದೀನ್ ಪಾಲ್ಗೊಂಡಿರುವುದು ಗೌರವ ತಂದಿದೆ ಎಂದರು.

ಟೂರ್ನಿಯನ್ನು ಅತ್ಯುತ್ತಮವಾಗಿ ಅಚ್ಚುಕಟ್ಟಾಗಿ ಆಯೋಜಿಸಿರುವ ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿಶೇಷ ಕಾಳಜಿ ಹಾಗೂ ಶ್ರಮ ವಹಿಸಿರುವುದು ಸರಕಾರಕ್ಕೆ ಗೌರವ ತಂದಿದೆ. 1937ರಲ್ಲಿ ಆರಂಭಗೊಂಡಿರುವ ಈ ಟೆನಿಸ್ ಕೋರ್ಟ್‌ನಲ್ಲಿ 5 ಸೌರಚಾಲಿತ ಹಸಿರು ಕೋರ್ಟ್‌ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಪಂದ್ಯಾವಳಿಯು ಇಡೀ ಉತ್ತರ ಕರ್ನಾಟಕಕ್ಕೆ ಮನ್ನಣೆ ತಂದಿದೆ ಎಂದು ತಿಳಿಸಿದರು. ಸದ್ಯ ಕ್ರಿಕೆಟ್ ಹೆಚ್ಚಾಗಿ ಬೆಳೆದಿದೆ. ಉಳಿದ ಕ್ರೀಡೆಗಳಿಗೂ ಮನ್ನಣೆ ದೊರೆಯಬೇಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದ ಪಂದ್ಯಗಳು ಧಾರವಾಡದಲ್ಲಿ ನಡೆಯಲಿ ಎಂದು ಲಾಡ್ ಹಾರೈಸಿದರು.


ಇದೇ ಸಂದರ್ಭದಲ್ಲಿ ಮೊಹಮ್ಮದ್ ಅಜರುದ್ದೀನ್ ಅವರಿಗೆ ಧಾರವಾಡ ಪೇಡಾ ಕಾಣಿಕೆಯಾಗಿ ನೀಡಲಾಯಿತು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, 17 ವರ್ಷದ ನಂತರ ಧಾರವಾಡದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಪಂದ್ಯಾವಳಿ ಜರುಗುತ್ತಿದ್ದು, 12 ದೇಶಗಳ 45 ಆಟಗಾರರು ಭಾಗವಹಿಸಲಿದ್ದಾರೆ. ಅಂತಿಮ ಡಬಲ್ಸ್ 21 ರಂದು ಹಾಗೂ ಸಿಂಗಲ್ಸ್ 22 ರಂದು ಜರುಗಲಿವೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ ಉಪಸ್ಥಿತರಿದ್ದರು. ಟೆನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪ ಬಣವಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *