ಹೊರಟ್ಟಿಗೆ ಟಿಕೆಟ್ ನೀಡಲ್ಲ – ಲಿಂಬಿಕಾಯಿ
ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷದವರು ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ನೀಡುವುದಿಲ್ಲ. ನಾನು ಆ ಪಕ್ಷದಿಂದಲೇ ಸ್ಪರ್ಧಿಸೋದು ಅಲ್ಲದೇ ಶಿಕ್ಷಕರ ಕ್ಷೇತ್ರ ಗೆಲ್ಲುವುದು ಕೂಡ ನಿಶ್ಚಿತ ಎಂದು ಮಾಜಿ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರ ಕ್ಷೇತ್ರದ ಸೋಲಿಲ್ಲದ ಸರದಾರ, ಸಭಾಪತಿ ಬಸವರಾಜ ಹೊರಟ್ಟಿ ಮುಂದಿನ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಗರದಲ್ಲಿಂದು ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನಾನು ಎಲ್ಲ ಮುಖಂಡರ ಜೊತೆ ಮಾತನಾಡಿದ್ದೇನೆ. ಯಾರ್‍ಯಾರೋ ಏನೇನೋ ಮಾತಾಡ್ತಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದಾರೆ.ಹಾಗಾಗಿ ನಾನು ಬೇರೆಯವರ ಬಗ್ಗೆ ವಿಚಾರ ಮಾಡದೆ ಚುನಾವಣೆ ಬಗ್ಗೆ ಮಾತ್ರ ಗಮನಹರಿಸಿದ್ದೇನೆ.ಅಲ್ಲದೇ ಪಶ್ಚಿಮ ಕ್ಷೇತ್ರದ ಟಿಕೆಟ್ ನನಗೆ ಗ್ಯಾರಂಟಿ ಎಂದರು.
ಹೊರಟ್ಟಿಯವರನ್ನು ಯಾರೂ ಪಕ್ಷಕ್ಕೆ ಆಹ್ವಾನಿಸಿಲ್ಲ.ಅಲ್ಲದೇ ಅವರಿಗೆ 73 ವರ್ಷ ಆಗಿದೆ. ನಮ್ಮ ಪಕ್ಷದಲ್ಲಿ 75 ವರ್ಷ ಅದವರಿಗೆ ಟಿಕೆಟ್ ನೀಡಲ್ಲ ಹೀಗಾಗಿಯೇ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಗುಜರಾತ್‌ನಲ್ಲಿ ಆನಂದಿ ಬೆನ್ ರಾಜೀನಾಮೆ ನೀಡಿದ್ದು ಇವರಿಗೂ ಇದು ಅನ್ವಯಿಸಲಿದೆ ಎಂದರು.
ಹೊರಟ್ಟಿಯವರು ಸಭಾಪತಿಯಾಗಿ ಪಕ್ಷಕ್ಕೆ ಸೇರುತ್ತೇನೆ ಅನ್ನೋದು ತಪ್ಪು ಇದು ಸಂವಿಧಾನ ಉಲ್ಲಂಘನೆ ಮಾಡಿದ ಹಾಗೆ ಎಂದರಲ್ಲದೇ ಈಗಾಗಲೇ ೧೦ ಸಾವಿರ ಶಿಕ್ಷಕರ ನೋಂದಣಿ ಮಾಡಿಸಿದ್ದು ಅನೇಕ ಕಡೆ ಪ್ರಚಾರವನ್ನೂ ಮಾಡಿದ್ದು ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸ್ವತಂತ್ರವಾಗಿ ನಿಂತರೆ ಹೊರಟ್ಟಿಯವರು ಈ ಬಾರಿ ಗೆಲ್ಲೋದಿಲ್ಲ
ಹೀಗಾಗಿ ಅವರು ಬಿಜೆಪಿಗೆ ಬರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವಾಯುವ್ಯ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ,ಆನಂದ ಕುಲಕರ್ಣಿ, ಶ್ರೀಧರ ರಡ್ಡೇರ,ಆರ್.ಎಸ್.ಮಿಟ್ಟಿಮನಿ ಮುಂತಾದವರು ಇದ್ದರು.