ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ
ನವಲಗುಂದ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂಟು ವರ್ಷದಲ್ಲಿ ಅಮೋಘವಾದ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೈತರ ಆದಾಯವನ್ನ ದ್ವಿಗುಣಗೊಳಿಸಲು ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೋದಿಯವರು ದೇಶಾದ್ಯಂತ ಹಲವು ಯೋಜನೆಗಳನ್ನು ಜಾರಿಗೆ ತಂದು ಜನಹಿತವನ್ನ ನಿರಂತರವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಯೋಜನೆಗಳು ನವಲಗುಂದದಲ್ಲೂ ಪರಿಣಾಮಕಾರಿಯಾಗಿ ನಡೆಯುತ್ತಿವೆ. ತುಪರಿಹಳ್ಳದ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ತಮ್ಮ ಕ್ಷೇತ್ರದಲ್ಲಿ ಜವಳಿ ಪಾರ್ಕ್ ನಿರ್ಮಾಣವನ್ನು ಎರಡ್ಮೂರು ತಿಂಗಳಲ್ಲಿ ಆರಂಭಿಸುತ್ತೇವೆ. ಈ ಮೂಲಕ ಐದು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಕೆಲಸಕ್ಕೆ ಬೇಕಾಗುವ ತರಬೇತಿ ಸಹ ನೀಡಲಾಗುವುದು. ಅಲ್ಲದೇ ಜಿಲ್ಲೆಯಲ್ಲಿ ಆಕ್ಸಿಜನ್ ಘಟಕಗಳನ್ನು ಆರಂಭಿಸಲಾಗಿದ್ದು, ಈ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ರಹಿತವಾಗಿ, ಕಳಂಕ ರಹಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬರು ನಮ್ಮವರು ಎನ್ನುವಂತೆ ಬಿಜೆಪಿ ನಡೆದುಕೊಂಡು ಬರುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಯುವಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ನಾಡಿನಲ್ಲಿ ಮೋದಿಯವರ ಉತ್ತಮ ಕಾರ್ಯಗಳು ನಡೆಯುತ್ತಿರುವುದಕ್ಕೆ ಜನರ ಆಶೀರ್ವಾದವೇ ಕಾರಣವಾಗಿದೆ. ಅವರು ಸಬ್ ಕೇ ಸಾಥ್, ಸಬ್ ಕಾ ವಿಕಾಸ ಜೊತೆಗೆ ಹೊರಟಿದ್ದಾರೆ ಎಂದು ಹೇಳಿದರು.
ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಎಂ.ಪಿ.ಕುಲಕರ್ಣಿ, ಬಸಣ್ಣ ಬೆಳವಣಕಿ, ಶಂಕರಗೌಡ ರಾಯನಗೌಡ, ಮಹೇಶ ತೊಗಲಂಗಿ, ಮಹಾಂತೇಶ ಕಲಾಲ, ಬಸವರಾಜ ಕಟ್ಟಿಮನಿ, ವಿನಾಯಕ ದಾಡಿಬಾವಿ, ಪ್ರಭು ಇಬ್ರಾಹಿಮಪುರ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.