ರಾಜ್ಯಸಭೆ ಚುನಾವಣೆ: ಬಿಜೆಪಿ ಮೂರು ಅಭ್ಯರ್ಥಿ ಗೆಲುವು ನಿಶ್ಚಿತ
ಹುಬ್ಬಳ್ಳಿ: ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ಇದೆ ಎಂದು ದೂರಿದರು. ಹಿಂದೆ ಜವಾಹರಲಾಲ್ ನೆಹರು ಅವರು ಆರೆಸ್ಸೆಸ್ ನಿಷೇಧಿಸಿ ಕೈಸುಟ್ಟುಕೊಂಡಿದ್ದರು. ಇಂದಿನ ಕಾಂಗ್ರೆಸ್ ಸಂಘವನ್ನು ಟೀಕಿಸುವ ಮೂಲಕ ಅದೇ ತಪ್ಪನ್ನು ಮಾಡುತ್ತಿದೆ. ಸೋಲುವ ಭೀತಿಯಿಂದ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಸಂಘದ ವಿರುದ್ಧದ ಟೀಕೆಯ ಭಾಗವಾಗಿ ಸಿದ್ದರಾಮಯ್ಯ ಅವರು ಚಡ್ಡಿಗೆ ಬೆಂಕಿ ಹಚ್ಚುವುದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಹ ಮುಂದಿನ ಚುನಾವಣೆಯಲ್ಲಿ ಕೈ ಸುಟ್ಟುಕೊಳ್ಳಲಿದೆ ಎಂದರು.
ರಾಜ್ಯದಲ್ಲಿ ಸಂಘದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳು ತುಷ್ಟೀಕರಣದ ರಾಜಕೀಯದ ಭಾಗವಾಗಿದೆ. ಆ ಪಕ್ಷಕ್ಕೆ ಹಿಂದೂಗಳ ಮತ ಬೇಕಿಲ್ಲ. ಬದಲಿಗೆ, ಜೆಡಿಎಸ್ ಪರ ಇರುವ ಮುಸ್ಲಿಮರ ಮತಗಳನ್ನು ತನ್ನತ್ತ ಸೆಳೆಯಲು ಸಂಘವನ್ನು ಗುರಿಯಾಗಿಟ್ಟುಕೊಂಡು ನಿರಂತರವಾಗಿ ಟೀಕೆಗಳನ್ನು ಮಾಡುತ್ತಿರುವ ಆ ಪಕ್ಷದ ಮುಖಂಡರು, ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಕಾದು ನೋಡಿ, ಪಠ್ಯಪುಸ್ತಕದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವ ಮೂಲಕ ಅಪಪ್ರಚಾರ ಮಾಡುತ್ತಿದೆ. ಪಠ್ಯಪುಸ್ತಕದಲ್ಲಿ ತಪ್ಪುಗಳಿದ್ದರೆ ತಿದ್ದುವುದಾಗಿ ಸರ್ಕಾರ ಹೇಳಿದೆ ಎಂದು ತಿಳಿಸಿದರು.
ಸಂವಿಧಾನದಲ್ಲಿ ಎಲ್ಲಾ ಸಂಘಟನೆಗಳಿಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಅವರು ಮಾಡಲಿ ಆದರೆ ಅವರ ಅಜೆಂಡಾಗಳಿಗೆ ನಾವು ಮನ್ನಣೆ ನೀಡಲು ಆಗಲ್ಲ. ಹಿಂದೂ ಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದಕ್ಕೆ ಬದ್ಧವಾಗಿ ದೇಶದಲ್ಲಿ ಹಲವಾರು ಕಾಯ್ದೆ ತರಲಾಗಿದೆ. ಆದರೆ ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವ ನಮ್ಮದಾಗಿದೆ. ಒಂದು ಸರ್ಕಾರದಲ್ಲಿದ್ದಾಗ ಸಂವಿಧಾನ ಆಧಾರದ ಮೇಲೆ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮೇಯರ್ ಈರೇಶ ಅಂಚಟಗೇರಿ, ಉಪಮೇಯರ್ ಉಮಾ ಮುಕುಂದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ಬಸವರಾಜ ಕೂಂದಗೋಳಮಠ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ, ಅಶೋಕ ಕಾಟವೆ, ಚಂದ್ರಶೇಖರ ಗೋಕಾಕ ಗೋಷ್ಠಿಯಲ್ಲಿದ್ದರು.