ಹುಬ್ಬಳ್ಳಿ-ಧಾರವಾಡ ಸುದ್ದಿ

ಸಿದ್ದರಾಮಯ್ಯ ಒಬ್ಬ ಅಸಮರ್ಥ ರಾಜಕಾರಣಿ: ಕಟೀಲ್

ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಗಲಭೆಗಳಿಗೆ ಕಾರಣ

ಹುಬ್ಬಳ್ಳಿ: ಸಿದ್ದರಾಮಯ್ಯ ಒಬ್ಬ ಅಸಮರ್ಥ ರಾಜಕಾರಣಿ. ಅವರು ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಕೋಮು ಗಲಭೆಗಳಿಗೆ ಕಾರಣ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಗಂಭೀರ ಆರೋಪಿಸಿದರು.


ಕಲ್ಲು ತೂರಾಟಕ್ಕೆ ಒಳಗಾದ ಹಳೇಹುಬ್ಬಳ್ಳಿಯ ಗಲಭೆ ಸ್ಥಳ ಹಾಗೂ ದಿಡ್ಡಿ ಓಣಿಯ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆದವು. ಕೇರಳದಿಂದಲೂ ಬಂದು ಇಲ್ಲಿ ಗಲಭೆಗಳನ್ನು ಸೃಷ್ಟಿಸಿದರು. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಬಿಟ್ಟು ಮೃದು ಧೋರಣೆ ತೋರಿದರು. ಅಪರಾಧಿಗಳಿಗೆ ಬಿಡುಗಡೆ ಭಾಗ್ಯ ನೀಡಿದರು. ಅದರ ಪರಿಣಾಮವೇ ಇಂದು ಗಲಭೆಗಳಿಗೆ ಪ್ರೇರಣೆಯಾಗಿದೆ. ಇಂಥವರು ನಮ್ಮ ಸರಕಾರದ ಬಗ್ಗೆ ಮಾತ ನಾಡುತ್ತಾರೆ ಎಂದರು.


ಹುಬ್ಬಳ್ಳಿ ಗಲಭೆಯು ಪೂರ್ವ ನಿಯೋಜಿತ ಕೃತ್ಯ. ಇದರ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಖಚಿತ. ಎಐಎಂಐಎಂ ಪಕ್ಷವೇ ಆಗಲಿ ಇತರ ಸಂಘಟನೆಗಳಾಗಲಿ ಪೊಲೀಸರು ಕ್ರಮ ಕೈಗೊಳ್ಳತ್ತಿದ್ದಾರೆ. ಇದೊಂದು ಭಾವನೆಗಳಿಂದ ಕೆರಳಿದ ಘಟನೆ ಅಲ್ಲ. ದೇವಾಲಯಗಳ ಮೇಲೆ, ಪೊಲೀಸರ ಮೇಲೆ ದಾಳಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಗಲಭೆಗೆ ಯಾರೇ ಕಾರಣರಾದವರನ್ನು ಸಹ ನಾವು ಬಿಡೋದಿಲ್ಲ. ಈಗಾಗಲೇ ಕೆಲ ಸಂಘಟನೆಗಳ ನಾಯಕರ ಬಂಧನ ಆಗಿದೆ ಎಂದರು.
ಗೃಹ ಸಚಿವ ಅಸಮರ್ಥರೆನ್ನುವ ಸಿದ್ದರಾಮಯ್ಯ ಅವರು ಐದು ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ. ಅವರಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ. ಅವರ ಸರಕಾರದಲ್ಲಿ ಅತಿ ಹೆಚ್ಚು ಗಲಭೆಯಾಗಿವೆ. ಹೆಚ್ಚು ಹಿಂದೂ ಯುವಕರ ಹತ್ಯೆಗಳಾಗಿವೆ. ಜೈಲಿನಲ್ಲಿಯೂ ಸಹ ಹತ್ಯೆಗಳಾಗಿದ್ದವು. ಆವಾಗಲೇ ಹತ್ಯೆಗಳನ್ನು ತಡಿಯೋಕೆ ಆಗಿಲ್ಲ. ಗಲಭೆಕೋರರಿಗೆ ಬಿ ರಿಪೋರ್ಟ್ ಕೊಡುವ ಕಾರ್ಯ ಅವರು ಮಾಡಿದರು. ಅದರಿಂದಲೇ ಇಂತಹ ಗಲಾಟೆಗಳಾಗುತ್ತಿವೆ. ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ ಎಂದು ಬಗ್ಗೆ ತನಿಖೆ ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾದಿಯಲ್ಲಿ ಈ ಗಲಭೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಭಾಗಿಯಾದ್ದರು ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು.


ಶಾಸಕ ಅರವಿಂದ ಬೆಲ್ಲದ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಮೋಹನ ಲಿಂಬಿಕಾಯಿ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ತೋಟಪ್ಪ ನಿಡಗುಂದಿ, ರವಿ ನಾಯಕ ಸೇರಿದಂತೆ ಅನೇಕರಿದ್ದರು.

 

administrator

Related Articles

Leave a Reply

Your email address will not be published. Required fields are marked *