ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶ; ಡಾ.ಹರೀಶ್ ಹಂದೆ ಅಭಿಪ್ರಾಯ
ಧಾರವಾಡ: ಮಹಿಳೆಯರ ಕುರಿತು ಪಾರಂಪರಿಕವಾಗಿ ಮತ್ತು ಸಾಮಾಜಿಕವಾಗಿ ಇರುವ ದೃಷ್ಟಿಕೋನದಲ್ಲಿ ವ್ಯಾಪಕ ಬದಲಾವಣೆಯಾಗುವುದರಿಂದ ಸುಸ್ಥಿರ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಎಂಧು ಸೆಲ್ಕೋ ಸಂಸ್ಥಾಪಕರು ಹಾಗೂ ರಾಮೋನ್ ಮಾಗ್ಸೆಸ್ಸೆ ಪುರಸ್ಕೃತರಾದ ಡಾ.ಹರೀಶ್ ಹಂದೆ ಹೇಳಿದರು.
ಧಾರವಾಡದ ರಾಯಪುರದಲ್ಲಿರುವ ಎಸ್‌ಕೆಡಿಆರ್ ಡಿಪಿಯಲ್ಲಿರುವ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ಮಹಿಳಾ ಸಮೃದ್ಧಿ ಸಂತೃಪ್ತಿ-2 ಎಂಬ ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
2030ರ ಹೊತ್ತಿಗೆ ಎಲ್ಲರಿಗೂ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಎಂಬ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಇನ್ನು ಏಳು ವರ್ಷಗಳಲ್ಲಿ ನಾವು ಈಗ ನಡೆಸುತ್ತಿರುವ ಎಲ್ಲ ರೀತಿಯ ಉದ್ಯಮಗಳ ಸ್ವರೂಪದಲ್ಲಿ ವ್ಯಾಪಕ ಬದಲಾವಣೆಯಾಗಲಿದೆ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿನ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುಟ್ಟಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ತೊಳೆಯುವ ಯಂತ್ರ, ಮೆಡಿಕಲ್ ಸಿರಿಂಜ್, ಬೆಂಕಿ ಆರಿಸುವ ಯಂತ್ರ, ಕಟ್ಟಡ ಕಟ್ಟಲು ಬಳಸುವ ಲಿಫ್ಟ್‌ಗಳ ಸಂಶೋಧನೆ ಮಾಡಿದ್ದು ಮಹಿಳೆಯರು, ಅಷ್ಟೇ ಏಕೆ 1843ರಲ್ಲಿ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್ ಅಲ್ಗಾರಿದಮ್ ಬರೆದಿದ್ದು ಮಹಿಳೆ ಎಂದ ಅವರು, ಅಭಿವೃದ್ಧಿಯ ವೇಗ ಗಣನೀಯವಾಗಿ ಹೆಚ್ಚಾಗಲು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಶೇ. 50 ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದರು.
ಐಕೆಇಎ ಫೌಂಡೇಶನ್‌ನ ಯೋಲಾಂಡಾ ವ್ಯಾನ್ ಗಿಂಕೆಲ್ ಮಾತನಾಡಿ, ಸೆಲ್ಕೋದ ಅನೇಕ ಆವಿಷ್ಕಾರಗಳು ಮಹಿಳೆಯರ ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡಿದ್ದು ಅವರ ಆದಾಯ ಹೆಚ್ಚಳಕ್ಕೆ ಕಾರಣವಾಗಿವೆ. ಸಮಾವೇಶದಲ್ಲಿ ಭಾಗವಹಿಸಿ ರುವ ಮಹಿಳೆಯರು ತಮ್ಮ ಯೋಜನೆ, ಯೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಅವುಗಳನ್ನು ತಮ್ಮ ಸಮುದಾಯಗಳಲ್ಲಿ ಹಂಚಿಕೊಳ್ಳಬೇಕು ಎಂದರು.
ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಭಾಗ್ಯರೇಖಾ ಅವರು ಮಾತನಾಡಿ, ಸಮಾಜ ಒಂದು ರೆಕ್ಕೆಯಿಂದ ಮುಂದಕ್ಕೆ ಚಲಿಸಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಂದು ರೆಕ್ಕಿಯಂತಿರುವ ಮಹಿಳೆಯ ಸಬಲೀಕರಣದಲ್ಲಿ ಸೆಲ್ಕೋದ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.
ಎಸ್ ಕೆಡಿಆರ್ ಡಿಪಿಯ ಪ್ರಾದೇಶಿಕ ನಿರ್ದೇಶಕ ದಿಗ್ಗೇಗೌಡ, ಸೆಲ್ಕೋ ಫೌಂಡೇಷನ್‌ನ ನಿರ್ದೇಶಕರಾದ ಹುದಾ ಜಾಫರ್ ಹಾಗೂ ಸಹಾಯಕ ನಿರ್ದೇಶಕರಾದ ರಚಿತಾ ಮಿಶ್ರ ಮಾತನಾಡಿದರು. ಸೆಲ್ಕೋ ಇಂಡಿಯಾದ ಉಪ ಮಹಾಪ್ರಬಂಧಕರಾದ ಗುರುಪದರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸೌರ ಉದ್ಯಮಿಗಳು, ಮಾರಾಟ ಪ್ರತಿನಿಧಿಗಳು ಹಾಗೂ ಸೇವಾಬಂಧುಗಳ ಅನುಭವ ಮತ್ತು ಅನಿಸಿಕೆಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸೆಲ್ಕೊ ಸಂಸ್ಥೆ ಸಿಇಒ ಮೋಹನ ಭಾಸ್ಕರ್ ಹೆಗಡೆ, ಸೆಲ್ಕೊ ಫೌಂಡೇಶನ್ ನಿರ್ದೇಶಕಿ ಹುದಾ ಜಾಫರ ಸೇರಿದಂತ ಇತರರಿದ್ದರು.
ಆವಂತಿ ಸುಬ್ರರಾಯ ಹೆಗಡೆ, ಸುಪ್ರಜಾ ಕಾಮತ ಸ್ವರ ಸಂಗಮ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲೇಶ ತಬಲಾ, ವಿನೋದ ಹಾರ್ಮೋನಿಯಂ ಸಾಥ ನೀಡಿದರು.