ಹುಬ್ಬಳ್ಳಿ: ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯವರು ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸುವಾಗ ಡಿಸಿಪಿ ರಾಮರಾಜನ್ ಅವರನ್ನು ಬಹಿರಂಗವಾಗಿ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಅಶೋಕ ಅಣ್ವೇಕರ ಹಾಗೂ ಇತರ 100ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ವತಃ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ. ರಾಮರಾಜನ್ ದೂರು ದಾಖಲಿಸಿದ್ದಾರೆ.
ಅಶೋಕ ಅಣ್ವೇಕರ ಜೊತೆಗಿದ್ದ ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ದಿ. 17ರಂದು ನವನಗರ ಪೊಲೀಸ್ ಠಾಣೆಯ ಮುಂದೆ ಏಕಾಏಕಿ ಪ್ರತಿಭಟಿಸಿ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಠಾಣೆಗೆ ನುಗ್ಗಿ ಸರ್ಕಾರಿ ಕರ್ತವ್ಯ ನಿಭಾಯಿಸಲು ಪೊಲೀಸರಿಗೆ ಅಡ್ಡಿಯುಂಟು ಮಾಡಿದ್ದಾರೆ. ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮತ್ತು ಶಾಂತಿಗೆ ಭಂಗವಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿಮಗೆ (ಪೊಲೀಸರಿಗೆ) ಹೆಲ್ಮೆಟ್ ಹಾಕದೆ ಇರುವವರನ್ನು ಹಾಗೂ ಸಣ್ಣ ಕಳ್ಳರನ್ನು ಹಿಡಿಯುವಂಥದ್ದನ್ನು ಬಿಟ್ಟರೆ ಮತಾಂತರದ ಆರೋಪಿಗಳನ್ನು ಹಿಡಿಯುವ ತಾಕತ್ತು ಇಲ್ಲ. ಒಬ್ಬ ಡಿಸಿಪಿಯಿಂದಾಗಿ ಪೊಲೀಸ್ ಇಲಾಖೆ ಮರ್ಯಾದೆ ಹರಾಜು ಆಗಿದೆ. ನೀನು ಯಾವ ಧರ್ಮಕ್ಕೆ ಹೋಗಿದ್ದಿಯಾ?, ಆ ಧರ್ಮದ ಯಾವ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟುಕೊಂಡು ಹೋಗಿದ್ದಿಯಾ? ಆ ವ್ಯಕ್ತಿಯ ಮೈತುಂಬಾ ಮಳೆ ಹೊಡೆದದ್ದನ್ನು ನೀನು ನೋಡಿದ್ದೀಯಾ? ಎಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಮರಾಜನ್ ದೂರಿನಲ್ಲಿ ತಿಳಿಸಿದ್ದಾರೆ.
ಅವಾಚ್ಯವಾಗಿ ಡಿಸಿಪಿ ನಿಂದಿಸಿದ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸ್ ಇಲಾಖೆಯಲ್ಲಿ ಶೇ 99ರಷ್ಟು ಜನ ಸಿಬ್ಬಂದಿ ಹಿಂದೂಗಳೇ ಇದ್ದು, ಅವರೆಲ್ಲ ಕಾನೂನು ಪಾಲನೆ ಮಾಡುತ್ತಿದ್ದಾರೆ. ಆದರೆ ಮತಾಂತರಿ, ದೇಶದ್ರೋಹಿ ಹಾಗೂ ಸೋನಿಯಾ ಗಾಂಧಿಯ ಚಮಚಾ ಡಿಸಿಪಿ, ಠಾಣೆಗೆ ಸಂಘಟನೆಯ ಕಾರ್ಯಕರ್ತರು ಕರೆದುಕೊಂಡು ಬಂದ ಆರೋಪಿಯನ್ನೇ ವಾಪಸ್ ಕಳುಹಿಸಿದ್ದಾನೆ ಎಂದು ವ್ಯಕ್ತಿಯೋರ್ವ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೊದಲ್ಲಿ ದಾಖಲಾಗಿತ್ತು.