ರೂರ್ಕಿ ಸಂಸ್ಥೆ ಆರ್ಕಿಟೆಕ್ಚರ್‌ಗೆ ನಾಝನೀನ್ ಪ್ರವೇಶ
ಧಾರವಾಡ : ದೇಶದ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ಒಂದಾಗಿರುವ ರೂರ್ಕಿ ಐಐಟಿಯಲ್ಲಿ ಪ್ರವೇಶ ಪಡೆಯುವುದು ಪ್ರತಿಭಾನ್ವಿತರ ಜೀವನದ ಮಹತ್ತರ ಕನಸು. ಇಲ್ಲಿ ಪ್ರವೇಶ ಸಿಗುವುದೂ ಅಷ್ಟೊಂದು ಸುಲಭವಲ್ಲ. ಒಂದು ಬಾರಿ ಪ್ರವೇಶ ಸಿಕ್ಕರೆ, ಅಂತಹ ಸಾಧನೆ ಮತ್ತೊಂದಿಲ್ಲ. ಅಲ್ಲದೇ ಭವಿಷ್ಯದ ಬಾಗಿಲು ತನ್ನಿಂದ ತಾನೆ ತೆರೆದುಕೊಳ್ಳಲಿದೆ.
ಪೇಡೆನಗರದ ಬಾಲಕಿಯೊಬ್ಬಳು ಇಂತಹ ಸಾಧನೆ ಮಾಡಿ ಹಿರಿಮೆ ಮೆರೆದಿದ್ದಾರೆ. ಹೌದು, ಇಲ್ಲಿನ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರ ಪುತ್ರಿ ನಾಝನೀನ್ ತಮಾಟಗಾರ ರೂರ್ಕಿ ಐಐಟಿಯಲ್ಲಿ ಆರ್ಕಿಟೆಕ್ಚರ್‌ಗೆ ಪ್ರವೇಶ ಪಡೆದಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ್‍ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ಇತ್ತೀಚೆಗೆ ಬಿಡುಗಡೆ ಮಾಡಿರುವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಐಐಟಿ ರೂರ್ಕಿಯ ಆರ್ಕಿಟೆಕ್ಚರ್ ವಿಭಾಗ ಮೊದಲ ರ್‍ಯಾಂಕಿಂಗ್ ಪಡೆದಿದೆ. ಕೇವಲ 40 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವ ಈ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆಯುವುದು ಸುಲಭದ ಮಾತಲ್ಲ.
ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ನಾಝನೀನ್ ಈ ಸಂಸ್ಥೆಯಲ್ಲಿ ವ್ಯಾಸಂಗಕ್ಕೆ ಅವಕಾಶ ಪಡೆದಿದ್ದಾರೆ. ನಾಝನೀನ್ ಮೊದಲಿನಿಂತಲೂ ಪ್ರತಿಭಾವಂತಳಾಗಿದ್ದು, ಕ್ರೀಡೆ, ವಿದ್ಯಾಭ್ಯಾಸ ದಲ್ಲಿ ಸದಾ ಮುಂಚೂಣಿಯಲ್ಲಿದ್ದಾಳೆ.
ಇವಳ ಸಾಧನೆಯನ್ನು ಮೆಚ್ಚಿರುವ ಹಲವರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಉತ್ತರ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಗಳಿಗೆ ರೂರ್ಕಿ ಐಐಟಿಯಲ್ಲಿ ಪ್ರವೇಶ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ ತಂದಿದೆ. ಏಕಾಗ್ರತೆಯಿಂದ ಓದಿ ಈ ಸಾಧನೆ ಮಾಡಿದ್ದಾಳೆ.
ಇಸ್ಮಾಯಿಲ್ ತಮಾಟಗಾರ, ಬಾಲಕಿ ತಂದೆ