ಹುಬ್ಬಳ್ಳಿ-ಧಾರವಾಡ ಸುದ್ದಿ
ಭೀಕರ ಅಪಘಾತ: 9 ಸಾವು; ಸಾವಿನ ಹೆದ್ದಾರಿಯಾದ ಬೈಪಾಸ್

ಭೀಕರ ಅಪಘಾತ: 9 ಸಾವು; ಸಾವಿನ ಹೆದ್ದಾರಿಯಾದ ಬೈಪಾಸ್

ಟ್ರ್ಯಾಕ್ಟರ್ ಹಿಂದಿಕ್ಕುವ ವೇಳೆ ಅವಘಡ- ಹಲವರ ಸ್ಥಿತಿ ಗಂಭೀರ

ಹುಬ್ಬಳ್ಳಿ: ನಗರದ ಹೊರವಲಯದ ರೇವಡಿಹಾಳ ಕ್ರಾಸ್ ಮೇಲ್ಸೇತುವೆ ಬಳಿ ಖಾಸಗಿ ಬಸ್ ಮತ್ತು ಅಕ್ಕಿ ಚೀಲ ಹೇರಿಕೊಂಡು ಹೊರಟಿದ್ದ ಲಾರಿ ನಡುವೆ ತಡರಾತ್ರಿ 12.45ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂಬತ್ತು ಜನ ಮೃತಪಟ್ಟಿದ್ದು 20ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.


ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ನ್ಯಾಶನಲ್ ಟ್ರಾವೆಲ್ಸ್ ಬಸ್( ಕೆಎ 51,ಎಎ 7146) ಚಾಲಕನು ಟ್ರ್ಯಾಕ್ಟರ್ ಹಿಂದಿಕ್ಕಿ ಮುಂದೆ ಸಾಗುವಾಗ ಈ ಅವಘಡ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿ ಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಬಂದ ಲಾರಿ( ಎಂಎಚ್ 16 ಎವಾಯ್ 6916) ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿಯು ಟ್ರ್ಯಾಕ್ಟರ್ ಮೇಲೆ ವಾಲಿಬಿದ್ದಿದೆ.


ಈ ಸರಣಿ ಅಪಘಾತದಲ್ಲಿ ಟೂರಿಸ್ಟ್ ಬಸ್‌ನಲ್ಲಿದ್ದ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜ, ಪ್ರಯಾಣಿಕರಾದ ಈಚಲ ಕರಂಜಿಯ ಬಾಬಾಸಾ ಅಣ್ಣಾಸಾ ಚೌಗಲೆ, ಚಿಕ್ಕೋಡಿಯ ಬಾಬೂಸಾಬ ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ. ಮೈಸೂರು ಮೂಲದ ಮೊಹಮ್ಮದ್ ಅಯಾನ್(17) ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇದರೊಂದಿಗೆ ಸಾವಿಗೀಡಾದವರ ಸಂಖ್ಯೆ 9ಕ್ಕೇರಿದೆ. ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸ್ ಆಯುಕ್ತ ಘಟನಾಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.


ಬಾಡ ಕ್ರಾಸ್‌ನಲ್ಲಿ ನಡೆದ ಅಪಘಾತ ಪ್ರಕರಣ ಮಾಸುವ ಮುನ್ನವೇ ಇದೀಗ ಹುಬ್ಬಳ್ಳಿ ಹೊರವಲಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ಹುಬ್ಬಳ್ಳಿ ಬೈಪಾಸ್‌ನ ಈ ಜಾಗದಲ್ಲಿ ಪದೇಪದೆ ದುರಂತಗಳು ಸಂಭವಿಸುತ್ತಿವೆ, ಅದು ‘ಸಾವಿನ ಹೆದ್ದಾರಿ’ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆ ಅಪಘಾತಗಳು ಸಂಭವಿಸದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *