ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಎಸ್‌ಸಿಎ ಧಾರವಾಡ ವಲಯ ಪಿಚ್‌ನಲ್ಲಿ ಚುನಾವಣೆ ಪಂದ್ಯಕ್ಕೆ ತಾಲೀಮು

ಕೆಎಸ್‌ಸಿಎ ಧಾರವಾಡ ವಲಯ ಪಿಚ್‌ನಲ್ಲಿ ಚುನಾವಣೆ ಪಂದ್ಯಕ್ಕೆ ತಾಲೀಮು

ಪ್ರಸನ್ನಕುಮಾರ ಹಿರೇಮಠ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ನೂತನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ದಿನಾಂಕ (ನ.30 ರಂದು) ನಿಗದಿಯಾಗಿದ್ದು, ಧಾರವಾಡ ವಲಯದಲ್ಲಿಯೂ ತುರುಸಿನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ವಲಯದ ಸಂಚಾಲಕ ಸ್ಥಾನಕ್ಕೆ ಪ್ರಮುಖವಾಗಿ ಇಬ್ಬರ ಹೆಸರುಗಳು ಕೇಳಿ ಬರುತ್ತಿವೆ.
ಮಾಜಿ ಕ್ರಿಕೆಟ್ ಪಟು ಬ್ರಿಜೇಶ್ ಪಟೇಲ್ ಬಣದಿಂದ ವೀರಣ್ಣ ಸವಡಿ ಹಾಗೂ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ ಪ್ರಸಾದ ಬಣದಿಂದ ಅಹ್ಮದರಝಾ ಕಿತ್ತೂರ ಸಂಚಾಲಕ ಸ್ಥಾನದ ಚುನಾವಣೆ ಕಣಕ್ಕಿಳಿಯಲು ತಾಲೀಮು ಜೋರಾಗಿ ನಡೆಸಿದ್ದಾರೆ.

ಅಹ್ಮದರಝಾ ಕಿತ್ತೂರ ತಯಾರಿ:
ಈಗಾಗಲೇ ವೆಂಕಟೇಶ ಪ್ರಸಾದ ಅವರು, ತಮ್ಮೊಂದಿಗೆ ಗುರುತಿಸಿಕೊಂಡವರ ಬಣ ಬಿಡುಗಡೆ ಮಾಡಿದೆ. ಯಾರು ಯಾವ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂಬುದನ್ನು ಗುಟ್ಟಾಗಿ ಇಟ್ಟಿದ್ದಾರೆ. ವೆಂಕಟೇಶ ಪ್ರಸಾದ ಬಣದಲ್ಲಿ ಧಾರವಾಡ ವಲಯ ಸಂಚಾಲಕ ಸ್ಥಾನಕ್ಕೆ ಸ್ಪರ್ಧಿಸಲು ಅಹ್ಮದರಝಾ ಕಿತ್ತೂರ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಕಿತ್ತೂರ ಅವರು ಹುಬ್ಬಳ್ಳಿಯ ಕೆ. ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿದ್ದು, ಧಾರವಾಡ ವಲಯದ ಹಾಲಿ ಸದಸ್ಯರಾಗಿದ್ದಾರೆ.

ಪಿಚ್‌ಗಿಳಿಯಲು ಅನುಭವಿ ಸವಡಿ ಸಿದ್ಧ:
ಹು-ಧಾ ಮಹಾನಗರದ ಮಾಜಿ ಮಹಾಪೌರರು, ಪಾಲಿಕೆ ಸದಸ್ಯರೂ ಹಾಗೂ ಕ್ರೀಡಾಪ್ರೇಮಿಗಳೂ ಆಗಿರುವ ವೀರಣ್ಣ ಸವಡಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿದ್ದು, ಕಳೆದ ೧೮ ವರ್ಷದಿಂದ ವಲಯದ ಅಧ್ಯಕ್ಷರಾಗಿ ಅನುಭವ ಹೊಂದಿದವರಾಗಿದ್ದಾರೆ. ಕ್ರಿಕೆಟ್ ಆಟಗಾರರೂ ಆಗಿದ್ದ ಅವರು, ಮೈಸೂರು ಒಡೆಯರಾದ ಶ್ರೀಕಂಠದತ್ತ ಅರಸರು ಕೆಎಸ್‌ಸಿಎ ಅಧ್ಯಕ್ಷರಾಗಿದ್ದಾಗಿನಿಂದಲೂ ಧಾರವಾಡ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಬ್ರಿಜೇಶ್ ಪಟೇಲ್ ಬಣದಿಂದ ಧಾರವಾಡ ವಲಯ ಸಂಚಾಲಕ ಸ್ಥಾನದ ಚುನಾವಣೆ ಕಣಕ್ಕಿಳಿಯಲು ಸಿದ್ಧಗೊಂಡಿದ್ದಾರೆ. ಅವರ ಬಹುವರ್ಷಗಳ ಅನುಭವ, ಜನಪ್ರಿಯತೆ, ಕ್ರೀಡಾ ವಲಯದಲ್ಲಿನ ಅವರ ಯೋಜನೆಗಳು, ಮುಂಬರುವ ದಿನಗಳಲ್ಲಿನ ಯೋಜನೆಗಳ ಪ್ಲಸ್ ಪಾಯಿಂಟ್‌ಗಳೊಂದಿಗೆ ಪಿಚ್‌ಗೆ ಇಳಿಯಲು ಸಿದ್ಧಗೊಂಡಿದ್ದಾರೆ.

ಒಟ್ಟು 16 ಸ್ಥಾನಗಳಿಗೆ ಚುನಾವಣೆ
3 ವರ್ಷದ ಅವಧಿಯ ಕೆಎಸ್‌ಸಿಎ ಮಂಡಳಿ ಚುನಾವಣೆಯಲ್ಲಿ ಆಜೀವ ಸದಸ್ಯರು ಹಾಗೂ ಸಾಂಸ್ಥಿಕ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಕ್ಲಬ್‌ಗಳಿಗೆ ಸಾಂಸ್ಥಿಕ ಸದಸ್ಯತ್ವ ನೀಡಲಾಗಿದೆ. ೧೫೬೧ ಆಜೀವ ಸದಸ್ಯರು ಹಾಗೂ 343 ಸಾಂಸ್ಥಿಕ ಸದಸ್ಯರು ಸೇರಿ ಒಟ್ಟು 1904 ಮತಗಳಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ ಬೆಂಗಳೂರಿನ ೫, ಧಾರವಾಡ, ಮಂಗಳೂರು, ಮೈಸೂರು, ರಾಯಚೂರು, ತುಮಕೂರ ಹಾಗೂ ಶಿವಮೊಗ್ಗದ ತಲಾ 1 ಸಂಚಾಲಕ ಸ್ಥಾನ ಸೇರಿ 16 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ನ.12 ರಿಂದ 15 ರವರೆಗೆ ನಾಮಪತ್ರ ಸಲ್ಲಿಕೆ, 17 ರಂದು ಪರಿಶೀಲನೆ, 18 ರಂದು ನಾಮಪತ್ರ ಹಿಂಪಡೆಯುವುದು, 19 ರಂದು ಕಣದಲ್ಲಿರುವವರ ಪಟ್ಟಿ ಪ್ರಕಟವಾದಂತೆ 30 ರಂದು ಬೆಂಗಳೂರಲ್ಲಿ ಮತದಾನ ಜರುಗುತ್ತದೆ.
ಧಾರವಾಡ ವಲಯವು ಬೆಳಗಾವಿ, ಗದಗ, ಹಾವೇರಿ, ಉ.ಕ ಜಿಲ್ಲಾ ವ್ಯಾಪ್ತಿಯ ಇದರ ಕಚೇರಿ ಹುಬ್ಬಳ್ಳಿ ರಾಜನಗರ ಮೈದಾನದಲ್ಲಿದೆ. ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್, ಕರ್ನಾಟಕ ಸ್ಟಾರ್ ಸ್ಪೋರ್ಟ್ಸ್ ಕ್ಲಬ್, ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್, ಧಾರವಾಡದ ಸಿಸಿಕೆ, ಕಾಸ್ಮೋಸ್ ಕ್ಲಬ್, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್, ಯೂನಿಯನ್ ಜಿಮ್ಖಾನಾ ಮತ್ತು ಗೋಕಾಕ ಸ್ಪೋರ್ಟ್ಸ್ ಕ್ಲಬ್ ಧಾರವಾಡ ವಲಯದಿಂದ ಮತದಾನ ಹಕ್ಕು ಹೊಂದಿದ ಸಾಂಸ್ಥಿಕ ಸದಸ್ಯ ಕ್ಲಬ್‌ಗಳಾಗಿವೆ. ಹುಬ್ಬಳ್ಳಿ ಭರತ್ ಖಿಮ್ಜಿ ಆಜೀವ ಸದಸ್ಯರಾಗಿ ಮತದಾನದ ಹಕ್ಕು ಹೊಂದಿದ್ದಾರೆ. ಇವರಷ್ಟೆ ಅಲ್ಲದೆ ವಲಯ ಸಂಚಾಲಕ ಸ್ಥಾನಕ್ಕೆ ಸ್ಪರ್ಧಾಳುಗಳು ಆಜೀವ ಸದಸ್ಯತ್ವ ಹಾಗೂ ಸಾಂಸ್ಥಿಕ ಸದಸ್ಯ ಕ್ಲಬ್‌ಗಳಿಂದಲೂ ಮತ ಪಡೆಯಬೇಕಗಿದೆ.
ಧಾರವಾಡ ವಲಯದ ಸಂಚಾಲಕ ನಿಖಿಲ್ ಭೂಸದ ಅವಧಿ ಸೆ.೩೦ಕ್ಕೆ ಕೊನೆಯಾಗಿದ್ದು, ಹೊಸ ಸಂಚಾಲಕರು ಅಧಿಕಾರಕ್ಕೆ ಬರುವವರೆಗೆ ಹಂಗಾಮಿಯಾಗಿರುತ್ತಾರೆ. ಇದಕ್ಕೂ ಪೂರ್ವ ಬೆಳಗಾವಿ ಅವಿನಾಶ ಪೋತದಾರ, ಹುಬ್ಬಳ್ಳಿ ಬಾಬಾ ಭೂಸದ(೪ಬಾರಿ) ಹಾಗೂ ಕೆ.ಸತೀಶ ಸಂಚಾಲಕರಾಗಿದ್ದರು. ಹಿಂದಿನ ೩ ಅವಧಿಗೆ ಚುನಾವಣೆ ನಡೆದಿರಲಿಲ್ಲ ಆದರೆ ಈ ಬಾರಿ ಮೊದಲ ಚುನಾವಣೆಗೆ ಎಲ್ಲರೂ ತಯಾರಾಗುತ್ತಿದ್ದಾರೆ.

ಕೆಎಸ್‌ಸಿಎ ಮಂಡಳಿಯ ಧಾರವಾಡ ವಲಯ ಸಂಚಾಲಕ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಬಣದಿಂದ ನಾನು ಸ್ಪರ್ಧಿಸುತ್ತಿದ್ದು, ಉದಯೋನ್ಮುಖರಿಗೆ ಅವಕಾಶ ನೀಡುವ ಉದ್ದೇಶ ಹೊಂದಲಾಗಿದೆ. ಮಹಿಳಾ ಕ್ರಿಕೆಟ್ಟಿಗರಿಗೂ ವಿಶೇಷ ತರಬೇತಿ ನೀಡಬೇಕಾಗಿದ್ದು, ಮೂಲಸೌಕರ್ಯ ಜತೆಗೆ ಕ್ರಿಕೆಟ್ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗುವುದು.


ವೀರಣ್ಣ ಸವಡಿ, ಅಧ್ಯಕ್ಷ, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್

ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ ಬಣದಲ್ಲಿ ಅಪಾರ ಅನುಭವ ಉಳ್ಳವರಿದ್ದಾರೆ. ನನಗಿದು ಒಳ್ಳೇ ಅವಕಾಶವಾಗಿದ್ದು, ಧಾರವಾಡ ವಲಯ ಸಂಚಾಲಕನಾದರೆ ಅಧ್ಯಕ್ಷ-ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಿಕೆಟ್ ಚಟುವಟಿಕೆಗೆ ಒತ್ತು ನೀಡುವೆ.


ಅಹ್ಮದರಝಾ ಕಿತ್ತೂರ, ಅಧ್ಯಕ್ಷ, ಕರ್ನಾಟಕ ಸ್ಟಾರ್ ಸ್ಪೋರ್ಟ್ಸ್ ಕ್ಲಬ್

administrator

Related Articles

Leave a Reply

Your email address will not be published. Required fields are marked *