ಹುಬ್ಬಳ್ಳಿ-ಧಾರವಾಡ ಸುದ್ದಿ
ಸಂಕ್ರಾಂತಿಯೊಳಗೆ ಮಹಾನಗರ ಬಿಜೆಪಿಗೆ ಹೊಸ ಸಾರಥಿ?;   ಬೆಲ್ಲದ ನಿರ್ಗಮನ ನಿಕ್ಕಿ;  ಮಜ್ಜಗಿ, ಸಾವಕಾರ, ಮುಂಚೂಣಿಯಲ್ಲಿ

ಸಂಕ್ರಾಂತಿಯೊಳಗೆ ಮಹಾನಗರ ಬಿಜೆಪಿಗೆ ಹೊಸ ಸಾರಥಿ?; ಬೆಲ್ಲದ ನಿರ್ಗಮನ ನಿಕ್ಕಿ; ಮಜ್ಜಗಿ, ಸಾವಕಾರ, ಮುಂಚೂಣಿಯಲ್ಲಿ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಗಳಿಗೆ ಇಲ್ಲಿ ನಡೆದಿರುವ ರಾಜ್ಯ ಕಾರ್ಯಕಾರಿಣಿ ಪೂರ್ಣ ವಿರಾಮ ಹಾಕಿದ್ದರೆ, ಪ್ರತಿಷ್ಠೆಯ ಹುಬ್ಬಳ್ಳಿ ಧಾರವಾಡ ಅವಳಿನಗರ ಬಿಜೆಪಿ ಅಧ್ಯಕ್ಷಗಿರಿಯಿಂದ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಬರುವ ಸಂಕ್ರಾಂತಿಯೊಳಗೆ ನಿರ್ಗಮಿಸುವುದು ನಿಶ್ಚಿತ ಎನ್ನಲಾಗಿದೆ.


ಪಕ್ಷದ ಚಟುವಟಿಕೆಗಳಲ್ಲಿ ಬೆಲ್ಲದ ಪೂರ್ಣವಾಗಿ ತೊಡಗಿಕೊಳ್ಳುವುದಿಲ್ಲ ಎಂಬ ಅಸಮಾಧಾನ ಬಹುತೇಕರದ್ದಾದರೆ, ಈಗ ನಡೆಯುತ್ತಿರುವ ಕಾರ್‍ಯಕಾರಿಣಿ ಸಹಿತ ವಿವಿಧ ಚಟುವಟಿಕೆಗಳಿಂದ ನೆಪಕ್ಕಷ್ಟೆ ಎಂಬಂತೆ ಬಳಸಿಕೊಂಡಿದ್ದಾರೆಂಬ ಅಸಂತೋಷ ಅವರದ್ದೆಂದು ಹೇಳಲಾಗುತ್ತಿದ್ದು, ಇಷ್ಟರಲ್ಲೇ ರಾಜ್ಯದಲ್ಲೇ ಅತ್ಯಂತ ಪವರಪುಲ್ ಮಹಾನಗರ ಅಧ್ಯಕ್ಷ ಪಟ್ಟಕ್ಕೆ ಹೊಸಬರು ನೇಮಕಗೊಳ್ಳಲಿದ್ದಾರೆನ್ನಲಾಗುತ್ತಿದೆ.
ಮೊದಲೇ ಶಾಸಕರಾಗಿದ್ದ ಬೆಲ್ಲದ ಅವರನ್ನು ಮಾಜಿ ಸಿಎಂ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ’ದೂರಾಲೋಚನೆ’ಯಿಂದ ಮತ್ತೊಂದು ಜವಾಬ್ದಾರಿ ನೀಡಿದ್ದರೂ, ಮಹಾತ್ವಾಕಾಂಕ್ಷಿ ಯೋಜನೆ ಬಿ.ಆರ್.ಟಿ.ಎಸ್ ಯೋಜನೆ ವಿರುದ್ಧ ಮೊದಲು ಅಪಸ್ವರವನ್ನು ಅವರೇ ಎತ್ತಿದ ನಂತರ ಎಲ್ಲವೂ ಸರಿಯಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಅಧ್ಯಕ್ಷರಾದ ನಂತರ ಒಮ್ಮೆಯೂ ಪೂರ್ಣ ಪ್ರಮಾಣದ ಕೋರ ಕಮೀಟಿ ಸಭೆಯೂ ನಡೆದಿಲ್ಲವಾಗಿತ್ತಲ್ಲದೇ ಇತ್ತೀಚಿನ ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲೂ ಆಂತರಿಕ ಅಸಮಾಧಾನ ಎದ್ದು ಕಂಡಿತ್ತು. ಅದರ ಪರಿಣಾಮ ಬಿಜೆಪಿಗೆ ಗುರಿ ತಲುಪಲು ಪರದಾಡುವಂತಾಯಿತು.


ಪಕ್ಷ ಸಂಘಟನೆ ದೃಷ್ಟಿಯಿಂದ ಮಹತ್ವದ್ದಾದ ರಾಜ್ಯ ಕಾರ್‍ಯಕಾರಿಣಿ ವಿಷಯದಲ್ಲಿ ತಮ್ಮನ್ನು ಬೈಪಾಸ್ ಮಾಡಿದ್ದು ಸ್ವತಃ ಬೆಲ್ಲದರಿಗೂ ಇರಿಸು ಮುರಿಸು ತಂದಿದ್ದು ಹಾಗಾಗಿಯೇ ಅವರು ನಿನ್ನೆ ಬೆಳಗಿನ ಯಾವುದೇ ಕಾರ್ಯಕ್ರಮದಲ್ಲೂ ಹಾಜರಿರದೇ ಮಧ್ಯಾಹ್ನ ಮುಖ್ಯಮಂತ್ರಿ ಬಂದ ನಂತರ ಬಂದು ಭಾಗವಹಿಸಿದ್ದರೆನ್ನಲಾಗಿದೆ.ಕಾರ್ಯಕಾರಿಣಿ ನಂತರ ಬೆಲ್ಲದ ರಾಜೀನಾಮೆ ನೀಡುವುದು ಬಹುತೇಕ ಖಚಿತಗೊಂಡಿದ್ದು ಹಾಲಿ ಅವಳಿನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ,ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಅಥವಾ ವಾಯುವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಇಬ್ಬರಲ್ಲೊಬ್ಬರು ಚುಕ್ಕಾಣಿ ಹಿಡಿಯಲಿದ್ದಾರೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೆಸರು ಕೇಳಿ ಬಂದಿತ್ತಾದರೂ ಅವರಿಗೆ ಪ್ರಥಮ ಪ್ರಜೆಯ ಪಟ್ಟ ನಿಕ್ಕಿ ಎನ್ನಲಾಗುತ್ತಿದ್ದು ಆ ಹಿನ್ನೆಲೆಯಲ್ಲಿ ಅವರ ಹೆಸರು ಪಟ್ಟಿಯಲ್ಲಿಲ್ಲವಾಗಿದ್ದು ಸಾವಕಾರ ಅಥವಾ ಮಜ್ಜಗಿ ಇಬ್ಬರಲ್ಲೊಬ್ಬರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಈಗಾಗಲೇ ಶೆಟ್ಟರ್ ಸಾವಕಾರ ಹೆಸರನ್ನು ಮುಂದಿಟ್ಟಿದ್ದಾರೆನ್ನಲಾಗಿದ್ದು ಜೋಶಿಯವರು ಮಜ್ಜಗಿ ಪರ ಬ್ಯಾಟಿಂಗ್ ನಡೆಸಿದ್ದಾರೆನ್ನಲಾಗಿದೆ.ಪಕ್ಷದ ಪ್ರಮುಖರು ಎಲ್ಲರ ಅಭಿಪ್ರಾಯ ಆಲಿಸಿ ವಾರದೊಳಗೆ ಹೊಸ ಅಧ್ಯಕ್ಷರ ನೇಮಕ ಮಾಡಲಿದ್ದಾರೆನ್ನಲಾಗಿದೆ.
ಹಾಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅಧ್ಯಕ್ಷರಾಗಿದ್ದಾಗ ಸಂಘಟನೆಯನ್ನು ಎಲ್ಲ ಹಿರಿಯ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಂಡು ಸತತ ಕಾರ್ಯಕ್ರಮಗಳ ಮೂಲಕ ವಿಸ್ತರಿಸಿದ್ದರೆಂಬುದು ಎಲ್ಲರಿಗೂ ಗೊತ್ತಿದ್ದು ಈಗ ಹಿಡಿತವಿಲ್ಲವೆನ್ನುವಂತೆ ಆಗಿದ್ದು ಬೆಲ್ಲದ ಮತ್ತು ಪ್ರಮುಖ ಪದಾಧಿಕಾರಿಗಳ ಮಧ್ಯೆ ಕೆಲ ಬಾರಿ ವಾಗ್ವಾದವೂ ಆಗಿದೆ.

ಹಿರಿಯರಿಗೆ ಬೆದರಿಕೆ

ಶಿಸ್ತಿನ ಪಕ್ಷದಲ್ಲಿ ಕೆಲವರ ವರ್ತನೆ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಇರುವವರಿಗೂ ಮುಜುಗುರ ತರುವಂತಾಗಿದೆ.ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಪರಾಭವಗೊಂಡಿರುವ, ಸಚಿವರೊಬ್ಬರ ಆಪ್ತ ಬಳಗದಲ್ಲಿರುವ ಇಬ್ಬರು ಹಿರಿಯರ ವಿರುದ್ಧ ಪಕ್ಷದ ಕಚೇರಿಯಲ್ಲೇ ಬೆದರಿಕೆ ಹಾಕುವಂತೆ ಮಾತನಾಡಿರುವುದು ದೊಡ್ಡ ಸುದ್ದಿಯಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದು ಅಲ್ಲದೇ ಕೆಲ ನಿಷ್ಟಾವಂತ ದಲಿತ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಿಸಿದ್ದೂ ಈಗ ಪ್ರಮುಖರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಕೋರ್ಟ ಮೆಟ್ಟಿಲು ಹತ್ತಲು ಚಿತ್ತ

ಇನ್ನೊಂದೆಡೆ ಓಬಿಸಿ ಎ ಗೆ ಮೀಸಲಾಗಿದ್ದ ಹು.ಧಾ. ಪಾಲಿಕೆ ಮೇಯರ್ ಸ್ಥಾನವನ್ನು ಬದಲಿಸಿ ಸಾಮಾನ್ಯರಿಗೆ ಮೀಸಲಾಗಿ ಬದಲಿಸಲು ಮುಂದಾಗಿರುವುದು ಬಿಜೆಪಿ ಆಂತರಿಕ ವಲಯದಲ್ಲಿ ಮತ್ತಷ್ಟು ಅಸಮಾಧಾನ ಭುಗಿಲೇಳುವಂತೆ ಮಾಡಿದ್ದು, ಬದಲಿಸಿದ್ದೇ ಆದಲ್ಲಿ ಕೋರ್ಟ ಮೆಟ್ಟಿಲು ಹತ್ತಲು ಸಹ ಕೆಲ ಹಿರಿಯ ಸದಸ್ಯರೇ ಚಿಂತನೆ ನಡೆಸಿದ್ದಾರೆನ್ನಲಾಗಿದೆ.ಈಗಾಗಲೇ ಈ ಬಗ್ಗೆ ಔಪಚಾರಿಕವಾಗಿ ಸಭೆಯನ್ನೂ ಮಾಡಿದ್ದಾರೆನ್ನಲಾಗಿದೆ.

 

administrator

Related Articles

Leave a Reply

Your email address will not be published. Required fields are marked *