ಶೀಘ್ರ ನನ್ನ ಎಲ್ಲ ಬೆಂಬಲಿಗರು ನನ್ನೊಂದಿಗೆ ಬರುತ್ತಾರೆ ಕಾಯ್ದು ನೋಡಿ
ಹುಬ್ಬಳ್ಳಿ: ನಾನು ಬಿಜೆಪಿ ಪಕ್ಷ ಟೀಕೆ ಮಾಡಲ್ಲ. ಅಲ್ಲಿ ಇರುವ ಕೆಲ ವ್ಯಕ್ತಿಗಳನ್ನು ಟೀಕೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಅವರು ಇಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಕಳೆದ ಎರಡು ವರ್ಷದಿಂದ ನನಗೆ ಪಕ್ಷದಲ್ಲಿ ಕೆಲ ವ್ಯಕ್ತಿಗಳು ತುಂಬಾ ನೋವು ಉಂಟು ಮಾಡಿದ್ದಾರೆ. ಬೊಮ್ಮಾಯಿ ಅಧಿಕಾರ ಬಂದಾಗಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇ. ಮುಂದೆ ನಾನೇ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೇ. ಆದರು ಅದಕ್ಕೆ ಅಲ್ಲಿ ಕವಡೆ ಕಿಮ್ಮತ್ತು ಕೊಡಲಿಲ್ಲ ಇದರಿಂದ ನನಗೆ ವೈಯಕ್ತಿಕವಾಗಿ ತೊಂದರೆ ಆಗಿದೆ. ನನಗೆ ತೊಂದರೆ ಕೊಟ್ಟವರ ಹೆಸರನ್ನು ಮುಂದಿನ ದಿನದಲ್ಲಿ ಬಹಿರಂಗ ಪಡಿಸುತ್ತೇನೆ. ಏ.19ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಶಕ್ತಿ ತುಂಬಲು ಶ್ರಮವಹಿಸುತ್ತೇನೆ. ನಮ್ಮ ಬೆಂಬಲಿಗರನ್ನು ಕೆಲ ನಾಯಕರು ಒತ್ತಡದಲ್ಲಿ ಹಿಡಿದುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಅವರು ನನ್ನೊಂದಿಗೆ ಬರುತ್ತಾರೆ. ತುಂಬಾ ದಿನ ಯಾರನ್ನು ಹಿಡಿದು ಇಟ್ಟು ಕೊಳ್ಳಲು ಸಾಧ್ಯವಿಲ್ಲ. ಶೀಘ್ರ ಎಲ್ಲ ನನ್ನ ಬೆಂಬಲಿಗರು ನನ್ನೊಂದಿಗೆ ಬರುತ್ತಾರೆ ಕಾಯ್ದು ನೋಡಿ ಎಂದರು.
ರಜತ್ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ, ಪ್ರಕಾಶ ಕ್ಯಾರಕಟ್ಟಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಶೆಟ್ಟರ್ ನಡೆಸಿಕೊಂಡ ರೀತಿ ಯಾರೂ ಒಪ್ಪಲಾರರು
ಬೆಂಗಳೂರು : ಹಿರಿಯರಾದ ಜಗದೀಶ ಶೆಟ್ಟರ ಸಜ್ಜನ, ನಿಷ್ಠುರ ಮತ್ತು ಪ್ರಾಮಾಣಿಕ ರಾಜಕಾರಣಿ. ಆದರೆ, ಬಿಜೆಪಿ ಅವರನ್ನು ಇತ್ತೀಚೆಗೆ ನಡೆಸಿಕೊಂಡ ರೀತಿ ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶೆಟ್ಟರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಶೆಟ್ಟರ್ ಮತ್ತು ನಮ್ಮ ಸಂಬಂಧ ಉತ್ತಮವಾಗಿದ್ದು, ಬೇರೆಯವರಂತೆ ಕೆಲಸ ಕಾರ್ಯಗಳಿಗೆ ಲಾಬಿ ಮಾಡಿದವರಲ್ಲ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವ ಕೆಲಸಕ್ಕೂ ಅವರು ಕೇಳಿಕೊಂಡು ಬಂದಿರಲಿಲ್ಲ. ಫೋನ್ ಕೂಡಾ ಮಾಡಿದವರಲ್ಲ. ಅಷ್ಟೊಂದು ಕಟ್ಟುನಿಟ್ಟಿನ ವ್ಯಕ್ತಿ ಅವರು. ನಾನು ಸಿಎಂ ಆದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಸಿಎಂ ಆದಾಗ ನಾನು ವಿಪಕ್ಷ ನಾಯಕನಾಗಿದ್ದೆ ಎಂದು ವಿವರಿಸಿದರು.
ಜನಸಂಘದ ಕುಟುಂಬದಿಂದ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರೂ ಸಹ ತಮ್ಮದೇ ಆದ ತತ್ವ ಸಿದ್ಶಾಂತ, ಹೊಂದಿರುವಂತಹ ವ್ಯಕ್ತಿತ್ವ. ಎಲ್ಲಕ್ಕೂ ಮುಖ್ಯವಾಗಿ ಸ್ವಾಭಿಮಾನಿ ವ್ಯಕ್ತಿತ್ವ. ಈಗ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್ಗೆ ಬಲ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.